ಕಾಯಿಲೆ ಬಿದ್ದನು ಗುಂಡಪ್ಪ
ಅವನಿಗೆ ಎರಡು ಗಂಡಪ್ಪ
ಬೇಡಿದರಿಬ್ಬರು ದೇವರನು
ದೇವಾ ಕಾಯೋ ನಮ್ಮಪ್ಪ!

ಶಾಮನ ಸೇವೆಗೆ ಭೀಮನ ಸೇವೆಗೆ
ಸ್ಪಂದಿಸಲಿಲ್ಲ ಚಿಕಿತ್ಸೆಗೆ
ಸಾವು ತನಗೆ ನಿಶ್ಚಿತವೆಂದು
ಮಕ್ಕಳ ಕರೆದನು ತನ್ನೆಡೆಗೆ
ಹೊಲದಲಿ ನಿಧಿಯನು ಹೂತಿಹೆ ನಾನು
ಸೋಮಾರಿಯಾಗದಿರೆಂದನು
ಧೈರ್ಯದಿ ಅಗೆದು ಪಡೆಯಿರಿ ನೀವು
ಎನುತಾ ಕಣ್ಣು ಮುಚ್ಚಿದನು
ಮಕ್ಕಳಿಬ್ಬರು ಹೊರಟರು ಹೊಲಕೆ
ಇಬ್ಬರ ಕೈಯಲು ಗುದ್ದಲಿ ಸಲಿಕೆ
ಹೊಲವನು ಅಗೆದರೂ ನಿಧಿ ಸಿಗದಾಯಿತು
ಉಳಿಯಿತು ಹಾಗೆಯೇ ಹೆಬ್ಬಯಕೆ
ಸುರಿಯಿತು ಮಳೆಯು ಹಸಿಯಾಯಿತು ಇಳೆ
ಕಣ್ಮನ ತುಂಬಿತು ಹಸಿರು ಬೆಳೆ
ಕಾಳನು ಮಾರಿ ಪಡೆದರು ಹಣವನು
ಮೂಡಿತು ಮೊಗದಲಿ ಶ್ರಮದ ಕಳೆ
ವರುಷೊರವು ತಾ ಫಸಲೂ ಬೆಳೆಯಿತು
ಅಪ್ಪನ ಮಾತಿನ ಅರ್ಥವು ಹೊಳೆಯಿತು
ಕೈ ಕೆಸರಾದರೆ ಬಾಯ್ಮೊಸರೆಂಬ
ಗಾದೆಯ ಮರ್ಮವು ತಿಳಿಯಿತು
#ನೀ. ಶ್ರೀಶೈಲ ಹುಲ್ಲೂರು