-ಮಕ್ಕಳ ಕಥನ ಕವನ-

ಮಿಡತೆಯೊಂದು ಹಾರಿ
ಬಂದು ಹಾಡತೊಡಗಿತು
ಅದರ ಸೊಗಸು ಕಂಡು
ಇರುವೆ ನೋಡತೊಡಗಿತು
ಬೇಸಿಗೆಯಲೆ ಆಹಾರ
ಹುಡುಕುತಿತ್ತು ಇರುವೆಯು
ಅದನು ಕಂಡು ನಗುತಿತ್ತು
ಬಿಡದೆ ಮಿಡತೆಯು
ಏಕೆ ಹೀಗೆ ಕೂಡಿಡುವೆ
ಮಳೆಗಾಲ ದೂರವು?
ಈಗಲೇ ನಿನಗೇಕಿದು
ಕೂಡಿಡುವ ಭಾರವು?
ಕೂಡಿಟ್ಟರೆ ತಾನದುವೆ
ಸುಖದ ಮೆಟ್ಟಿಲು!
ಆಪತ್ಕಾಲದಿ ಅದುವೆ
ಅಕ್ಷಯದ ಬಟ್ಟಲು!
ತಾವೆ ಹೀಗೆ ಎರಡೇ
ಮಾತಾಡಿಕೊಂಡವು
ಮತ್ತೆ ತಮ್ಮ ದಾರಿಯನೆ
ಹಿಡಿದುಕೊಂಡವು
ಗಾಳಿ ಬೀಸಿ ಮೋಡ ಕವಿದು
ಬೇಸಿಗೆಯು ಸರಿಯಿತು
ಧೋ ಧೋ ಎಂದು ಮಳೆಯು
ಬಿಡದೆ ಸುರಿಯಿತು
ಇರುವೆ ತಾನು ಬಿಡದ
ಮಳೆಗೆ ಮನೆಯಲುಳಿಯಿತು
ಕೂಡಿಟ್ಟ ಕಾಳು ತಿಂದು
ಮನದಿ ನಲಿಯಿತು
ಗಾಳಿ ಮಳೆಗೆ ನಲುಗಿ ಮಿಡತೆ
ದಿಕ್ಕು ತಪ್ಪಿತು
ಆಹಾರ ಸಿಗದೆ ಇರುವೆ ಮನೆಗೆ
ಹೋಗಲೊಪ್ಪಿತು
ಮಿಡತೆ ಕಂಡ ಇರುವೆ ತಾನು
ಒಳಗೆ ಕರೆಯಿತು
ಉಣಿಸಿ ತಿನಿಸಿ ತಣಿದ ಮೇಲೆ
ಹೀಗೆ ಹೇಳಿತು
ಈಗ ಎಲ್ಲ ಇದೆ ಎಂದು
ಸಂತೋಷಪಡದಿರು
ಕೂಡಿಡುವ ಸದ್ವಿಚಾರ
ಎಂದೂ ಬಿಡದಿರು
ಮಿಡತೆ ಮನದಿ ಮಿಡುಕುತಲಿ
ಹೊರಗೆ ಬಂದಿತು
ತನ್ನ ಮೂರ್ಖತನಕೆ ತಾನೆ
ಪೆಟ್ಟು ತಿಂದಿತು
#ನೀ.ಶ್ರೀಶೈಲ ಹುಲ್ಲೂರು