ಎಷ್ಟು ಗುಡಿಸಿದರೂ
ಹಸನವಿಲ್ಲೆದೆ ಬಯಲು
ವ್ಯಸನ ಮುರಿಯದೆ
ಬರದು ಬೆಳ್ಳಕ್ಕಿ ಸಾಲು

ಗಾಢಾಲಿಂಗನಕೆ ಜೋತು
ಗೊಂಡರೆ ತನುವು
ತಿಳಿನೀಲಿಯಾಗಸಕೆ ಮುಖವ
ಮಾಡದು ಮನವು
ಬೇರೂರಿ ಭೂರಮೆಯ
ಹೊಸಕಿ ಹಾಕಿದೆ ಜಾಡ್ಯ
ತಿಳಿಯಲಿಲ್ಲವು ಒಳಗು
ಮೆರೆಯಿತೆಲ್ಲೆಡೆ ಮೌಢ್ಯ
ಬೆತ್ತಲೆಯ ಕತ್ತಲಲಿ
ಹೊಳೆವ ಮಿಂಚಿನ ಬಳ್ಳಿ
ಕೈಗೆ ಸಿಗದದು ನಮಗೆ
ಮೆರೆವ ತಣ್ ಮಿಂಚುಳ್ಳಿ
ಬಾನ ನೋಡದೆ ನಾನು
ಸೂರ್ಯ ಚಂದ್ರರ ಕಾಣೆ
ಕಡಲಂದವದು ಎಲ್ಲಿ
ಸೇರಿಬಿಟ್ಟರೆ ಕೋಣೆ?

#ನೀ. ಶ್ರೀಶೈಲ ಹುಲ್ಲೂರು