ದಂಡಿನಿಂದ ದಣಿದು ಬಂದ
ಮಗನೆ ಮಲಗು ಸುಮ್ಮನೆ !
ನಿನ್ನ ಹಿರಿಮೆ ಗರಿಮೆಗಳಿಗೆ
ಸಣ್ಣದಿದು ಬಿಡು ನಮ್ಮನೆ

ನಿನ್ನ ಶೌರ್ಯ ಸಾಹಸಕ್ಕೆ
ಸಾಟಿ ಯಾರೂ ಇಲ್ಲ
‘ಮಾತೃಭೂಮಿಗಾಗಿ ಜೀವ ‘
ಬಿಡು ಚಿಂತೆಯನೆಲ್ಲ
ಹೆತ್ತ ಒಡಲು ಹೆಮ್ಮೆ ಕಡಲು
ನಿನ್ನ ದೇಶ ಪ್ರೇಮಕೆ
ಮತ್ತೆ ಜನುಮ ಎತ್ತಿ ಬರುವೆ
ನಿನ್ನಮ್ಮನಾಗುವುದಕೆ
ಬಿಸಿಲೆ ಇರಲಿ ಮಳೆಯೆ ಬರಲಿ
ಗುಡುಗು ಸಿಡಿಲು ಮಿಂಚುತಿರಲಿ
ನೋವ ಗೆಲಿದು ನುಗ್ಗುತಿರು
ಸಾವೆ ನಿನಗೆ ನಾಚುತಿರಲಿ
ನಿನಗೆ ಜನುಮ ಕೊಟ್ಟ ನಾನು
ತಾಯಿಯಾದೆ ಅಂದು
ಜೀವ ಜಗಕೆ ಸುಧೆಯ ಸುರಿದ
ಭುವಿಗೆ ಯಾರು ಮುಂದು?
ಯೋಧನೆಂಬ ಹಿರಿಮೆ ನಿನದು
ಜಗದಿ ಸರ್ವಮಾನ್ಯವು
ನಿನಗೆ ಹಾಲು ಕುಡಿಸಿ ತಣಿದ
ನನ್ನ ಎದೆಯು ಧನ್ಯವು!
#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
ಪ್ರತಿಯೊಬ್ಬ ತಾಯಿಯ ಮನದಾಸೆ ಇದು.
ಆದರೆ ಇಂದು ಭಯೋತ್ಪಾದಕರ ದಾಳಿಯಲ್ಲಿ ಮಗನನ್ನು ಕಳೆದುಕೊಂಡ ತಾಯಿಯ ಅಳಲಿನ ಆಳಕಿಳಿಯಲಾದೀತೇ?
ಹೇ ತಾಯೇ ,
ನಿನ್ನ ತ್ಯಾಗಕೆ ನಾವೆಲ್ಲ ತೃಣ ಸಮಾನ!