ಅಗಲಿದ ವೀರ ಯೋಧರಿಗೆ ವೀರಾಂಜಲಿ!
ಸೇನೆಯಲಿ ಜೀವದ ಹಂಗು ತೊರೆದು
ಹೋರಾಡುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೆ ಅರ್ಪಣೆ!

*ನಾನು ಯೋಧ*
ಬಾಣ ಬಿರುಸು
ಗಳೊಂದು ನಾಟವು
ಗಟ್ಟಿ ಎದೆಯೆನದು!
ಸೋಲದಿರುವುದೆ
ಎನ್ನ ಗರಿಮೆಯು
ದಿಟ್ಟ ನಿಲುವೆನದು!
ಉದಿತ ಮಾರ್ಗವು
ವಿದಿತವೆಲ್ಲವು
ಜಟ್ಟಿ ತನುವೆನದು!
ಕುದಿವ ಬಿಂದುವ
ನೊದವಿ ಸಾಗುವ
ನೆಟ್ಟ ಮನವೆನದು!
ತೇಲು ಬಾಣವ
ಕೈಲಿ ಹಿಡಿಯುವ
ಶೂರ ಪಡೆಯೆನದು!
ಹಾರು ಹಕ್ಯಿಯ
ಪುಕ್ಕ ಎಣಿಸುವ
ಧೀರ ನಡೆಯೆನದು!
ಬೆಳ್ಳಿ ಚುಕ್ಕಿಯ
ಅಂಗೈಲಿ ಧರಿಸುವ
ಭವ್ಯ ಬಲವೆನದು!
ಹಿಮಾಲಯವ
ಮುಂಗೈಲಿ ಭರಿಸುವ
ದಿವ್ಯ ಛಲವೆನದು!
ಸಾವ ಸಿರಿಯನೆ
ಕೊಳ್ಳೆ ಹೊಡೆಯುವ
ಪರಮ ಗುರಿಯೆನದು!
ಮತ್ತೆ ಈ ಮಣ್ಣಲಿ
ಜನ್ಮ ತಳೆಯುವ
ಪುಣ್ಯ ಸಿರಿಯೆನದು!
#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167