ದ್ವಿಭುಜಧಾರಿಯಾದೆನ್ನ
ಒನಪು ಒಯ್ಯಾರದೆ
ವಲ್ಲಭನ ಮಾಡಿ
ಚತುರ್ಭುಜಧಾರಿಯಾಗಿಸಿದೆ

ಸಾಕು ಸಾಕೆಂದರೂ
ಬಿಡದೆ ಕಾಡಿ ಬೇಡಿ
ಎಳೆದೆಳೆದು ವರುಷದಲೇ
ಷಡ್ಭುಜಧಾರಿಯಾಗಿಸಿದೆ
ಮತ್ತದೇ ವರಾತ
ತಲೆಬಾಗಿದೆ ನಾನೂ
ವರುಷೊಪ್ಪೊತ್ತಿನಲ್ಲಿಯೇ
ಅಷ್ಟಭುಜಧಾರಿಯಾಗಿಸಿದೆ
ನಿನ್ನಾಸೆಗೆ ಮಣಿದು
ಕುಣಿದು ಕುಣಿದು ದಣಿದಿರುವೆ
ಈಗಲಾದರೂ ಬಿಟ್ಟು ಬಿಡು
ನನ್ನ ನನ್ನ ಪಾಡಿಗೆ
ದಶಭುಜಧಾರಿಯಾಗಿಸುವ
ಹುಚ್ಚು ಸಾಹಸಕೆ
ನೀನೇನಾದರೂ ಕೈ ಹಾಕಿದರೆ
ಇಕೋ ನಾನಾಗಿಬಿಡುವೆ
ಖ
ಡ್ಗ
ಧಾ
ರಿ…..!
✍️ನೀ. ಶ್ರೀಶೈಲ ಹುಲ್ಲೂರು


