ಸಿಂಹವೊಂದು ಜಂಭದಿಂದ
ಕಾಡಲೆಲ್ಲ ತಿರುಗಿ ತಿರುಗಿ
ಪ್ರಾಣಿ ಪಕ್ಷಿಗಳನು ಕಾಡಿ
ಕಾಡಿಗೆಲ್ಲ ತಾನೆ
ರಾಜನೆಂದು ಬೀಗಿತು

ಪ್ರಾಣಿ ಪಕ್ಷಿ ಎಲ್ಲ ಬೆದರಿ
ಅದನು ಕಂಡ ಒಡನೆ ಚೆದುರಿ
ಓಡಿ ಹೋಗಿ ಮರೆಯಲೆಲ್ಲ
ಅವಿತುಕೊಂಡು ತಮ್ಮ
ಪ್ರಾಣ ಉಳಿಸಿಕೊಂಡವು
ನಿತ್ಯ ನರಕ ತಾಳದಾಗೆ
ಎಲ್ಲ ಸೇರಿ ಸಭೆಯ ಮಾಡಿ
ಬುದ್ಧಿ ಕಲಿಸೊ ದಾರಿ ಸಿಗದೆ
ಒಳಗೊಳಗೇ ಉಸಿರು
ಹಾಕಿ ಚಿಂತೆಗೊಂಡವು
ಒಂದು ದಿನವು ಬಾಲವೆತ್ತಿ
ಸಿಂಹ ತಾನು ತಿರುಗುತಿರಲು
ನೊಣವು ಬಂದು ಮೇಲೆ ಕುಳಿತು
ಸಿಂಹವನ್ನು ಪ್ರೀತಿಯಿಂದ
ನೋಡತೊಡಗಿತು
ಅದರ ಧೈರ್ಯ ಕಂಡು ಸಿಂಹ
ಉರಿದು ಬಿದ್ದು ಬಾಲ ಬಡಿದು
ನೊಣವು ಚದುರುವಂತೆ ಮಾಡಿ
ಖುಷಿಯಪಟ್ಟು ಮುಂದೆ ಮುಂದೆ
ಸಾಗತೊಡಗಿತು
ಬಿಡದ ನೊಣವು ಮತ್ತೆ ಹಾರಿ
ಅದರ ಮುಖದ ಮೇಲೆ ಏರಿ
ರೆಕ್ಕೆ ಬಡಿದು ಸ್ವರವ ತೆಗೆದು
ಗುಂಯ್ ಗುಂಯ್ ರಾಗವನ್ನು
ಹಾಡತೊಡಗಿತು
ಸಿಟ್ಟಿಗೆದ್ದ ಸಿಂಹ ತಾನು
ತನ್ನ ಪಂಜದಿಂದ ಹೊಡೆದು
ಮುಖಕೆ ಗಾಯ ಮಾಡಿಕೊಂಡು
ಹಾರಿ ಹೋದ ನೊಣದ ಕಡೆಗೆ
ನೋಡತೊಡಗಿತು
ಮತ್ತೆ ಕುಳಿತ ನೊಣಕೆ ಬಿಡದೆ
ಮತ್ತೆ ಬಡಿದು ಮುಖದ ತುಂಬ
ಗಾಯ ಮಾಡಿಕೊಂಡು ತಾನು
ನೊಣಕೆ ಸೋತು ಸಪ್ಪೆ ಮೋರೆ
ಹಾಕಿಕೊಂಡಿತು
ಬಲವು ತನ್ನಲಿದೆಯು ಎಂಬ
ಹಮ್ಮು ಬಿಮ್ಮು ಬೇಡ ನಮಗೆ
ಎಲ್ಲರೊಡನೆ ಬೆರೆತು ನಾವು
ಹಾಡಿ ಕುಣಿದು ಜಗವ ನಗಿಸಿ
ಸೊಗದಿ ಬಾಳುವ
#ನೀ.ಶ್ರೀಶೈಲ ಹುಲ್ಲೂರು