ಎದೆಯ ಗೂಡಿನಲಿ ಬಚ್ಚಿಟ್ಟ ನೆನಪುಗಳನು
ಮನದಿಂದಾಚೆ ಕಳಿಸಬೇಕಿದೆ…
ಕಣ್ಣ ಕೊನೆಯಲ್ಲಿ ಫಳಕ್ಕೆಂದು ಚಿಮ್ಮಲು
ತುದಿಗಾಲಲಿ ನಿಂತ ಕಂಬನಿಯನ್ನು ಮರೆಮಾಚಬೇಕಿದೆ…!

ಪಿಸುಗುಟ್ಟಿದ ನೂರು ಮಾತುಗಳನು ಮನದೊಳಗೆನೇ ಹೂತು ಹಾಕಬೇಕಿದೆ…
ನಿನ್ನೆದೆಗೊರಗಿ ನಾ ಕಟ್ಟಿದ ಕನಸಿನ ಮಹಲನು
ಕೈಯಾರೆ ನಾನೇ ಕೆಡವಬೇಕಿದೆ…!
ಪ್ರೀತಿಯ ನೀರುಣಿಸಿ ಬೆಳೆಸಿದ
ಒಲವ ಬಳ್ಳಿಯನು ಕರುಣೆಯಿಲ್ಲದೆ ಕತ್ತರಿಸಬೇಕಿದೆ…
ನಿನ್ನೊಲವಿಂದ ನನ್ನೊಳಗೆ ಮೊಳೆತ ಬಯಕೆಗಳನು
ನಾನೇ ಕತ್ತು ಹಿಸುಕಿ ಸಾಯಿಸಬೇಕಿದೆ…!
ಸೋತು ಹೋಗಿರುವೆ ಕೈಲಾದ ಪ್ರಯತ್ನ ಮಾಡಿ..
ಕೈ ಮುಗಿದು ಬೇಡುತ್ತಿರುವೆ…
ನನ್ನೊಳಗೆ ಕುಳಿತ ನೀನು ನನ್ನಿಂದ ದೂರ ಹೋಗಿಬಿಡು…
ನಿತ್ಯ ಬಸವಳಿವ ಈ ಬಡಪಾಯಿ ಹೃದಯಕ್ಕೆ
ಭಾವ ತಲ್ಲಣಗಳಿಂದ ಮುಕ್ತಿ ನೀಡು…!
- *ಪ್ರಮೀಳಾ ರಾಜ್*