ಅದೇಕೋ ಅವಳ ಕಣ್ಣೊಳಗಿನ ನೋವು
ನನ್ನಂತರಂಗವನ್ನು ಕುಟುಕಿದಂತಾಗುತ್ತಿದೆ…
ಏನೋ ಹೇಳಲು ತವಕಿಸುವ ಕಂಗಳು
ಏನೆಂದರಿವಲ್ಲಿ ಮನ ಸೋಲುತ್ತಿದೆ…!

ಕತ್ತಲಿನ ನೀರವ ಮೌನದಲ್ಲಿ
ಬಿಸಿಯಾದ ಹನಿಗಳು
ಕೆನ್ನೆಯಲಿ ನಿಲ್ಲದೇನೆ ಎದೆಯ ಸ್ಟರ್ಶಿಸಿದೆ…
ಹೃದಯಕೂ ಸಾಂತ್ವನಿಸುವ ಚೈತನ್ಯವಿಲ್ಲ
ಸುಮ್ಮನೆ ಬಿಕ್ಕಳಿಸುತಿದೆ….!
ಎದೆಗಾನಿಸೊಮ್ಮೆ ಮುದ್ದಿಸಿಬಿಡಲೆ….
ಇಲ್ಲ, ನನಗೂ ಅವಳಿಗೂ
ಅಷ್ಟು ದೂರದ ಅಂತರ…
ಸಮಾಜದ ರೀತಿ ರಿವಾಜುಗಳಿಗೆ
ಅಂತರಂಗ ಹೆದರಿಬಿಡುತ್ತದೆ..
ಸಾಂತ್ವನಿಸುವ ಆಸೆ ಮೌನವಾಗುತ್ತದೆ…!
ಅತ್ತು ಕರೆದು ರಂಪ ಮಾಡುತ್ತೇನೋ
ಮಗುವಿನಂತಹ ಅವಳ ಮುಗ್ಧ ಮನಸು..
ಸಹಿಸಲಾಗದೆ ಎದೆ ಭಾರವಾಗುತ್ತದೆ..
ಕಣ್ಣಂಚಿನ ಹನಿ ಹೊರಬರದಂತೆ
ಬಲವಂತದಿಂದ ಅವಿತು ಹೋಗುತ್ತದೆ…!
ವ್ಯಾಮೋಹವಿಲ್ಲ ಅವಳ ಬಗ್ಗೆ
ಆದರೆ ಹೇಳಲಾಗದ ಪ್ರೀತಿ ಇದೆ…
ಎದೆಬಿಗಿದು ಉಸಿರಾಡದಂತೆ
ಮಾಡುವ ನೆನಪುಗಳು
ಬಿಕ್ಕಳಿಸಿ ಜೋರಾಗಿ ಅಳುವಂತೆ ಮಾಡುತ್ತವೆ…!!
*ಪ್ರಮೀಳಾ ರಾಜ್*