ದೂರದ ಆಗಸದಲಿ ಒಂಟಿನಕ್ಷತ್ರವೊಂದು
ಅಮಾವಾಸ್ಯೆಯ ರಾತ್ರಿಯಲೂ
ಫಳಫಳನೆ ಹೊಳೆಯುತ್ತಿದೆ..
ಅದು ನೀನೆ ಇರಬಹುದೇನೋ ಎಂಬ
ಭಾವ ಮನಕೆ…!

ಮಧ್ಯರಾತ್ರಿಯವರೆಗೂ ಅದರೊಡನೆ ಸಂಭಾಷಿಸುತ್ತೇನೆ…
ಕಣ್ಮುಚ್ಚದೆ ದಿಟ್ಟಿಸಿ ನೋಡುತ್ತಿರುತ್ತೇನೆ..
ನಕ್ಷತ್ರ ನಿನ್ನ ನೈಜರೂಪವ
ತೋರಿಸುವುದೇನೋ ಎಂಬ ಆಸೆ ನನಗೆ…!
ಹೂಗಳ ಪರಿಚಯ ನನಗಿಲ್ಲ…
ಅದಾವುದೋ ಬಿಳಿಯ ಬಣ್ಣದ ಹೂಗಳ ಸೌರಭವ
ಮನದಣಿಯೆ ಆಸ್ವಾದಿಸುತ್ತೇನೆ
ಅಂದೊಮ್ಮೆ ನಿನ್ನ ಹೊಂಬಣ್ಣದ ತನುವಿನ
ಕಂಪನು ಅನುಭವಿಸಿದ ನೆನಪು…
ಬಿಳಿಯ ಹೂಗಳ ಸೌರಭದಲೂ
ನಿನ್ನದೇ ನೆರಳು…!
ಸಂಗೀತದ ಸಪ್ತಸ್ವರಗಳು ಯಾವುದೆಂದೇ ತಿಳಿದಿಲ್ಲ…
ಏಕಾಂತ ಮೌನದಲಿ ಭಾವನೆಗಳ ಗೀತೆಯೊಂದ ಕೇಳಿದಾಗ
ಮೈಮರೆತುಬಿಡುತ್ತೇನೆ…
ಸಂಗೀತದ ಆಲಾಪದಲ್ಲಿ ನಿನ್ನದೇ… ನಿನ್ನದೇ ಮುಗ್ಧ ನಗು !
*ಪ್ರಮೀಳಾ ರಾಜ್*