ನಿನ್ನೆ ಇಂದುಗಳು ಎಂದು ಹುಸಿ ಆಗಿ ಹೋಗದ ಸತ್ಯವು ನಾಳೆ/
ಬೆಳಿಗ್ಗೆಯಿಂದ ಸಂಜೆವರೆಗೆ ಪಡುವ ಪರಿಶ್ರಮದ ಫಲವೂ ನಾಳೆ//

ಸ್ವಂತಿಕೆ ಇರದ ಕನಸುಗಳು ಅಪೂರ್ಣ ಹೆಪ್ಪು ಹಾಕಲಿಟ್ಟ ರಾತ್ರಿ ಹಾಲು/
ಒಡೆಯುವ ಮುನ್ನ ಮೊಸರಾಗುವ ನನಸಿನ ಪ್ರಯತ್ನವೂ ನಾಳೆ //
ಬೀಜ ತಂದು ಸಸಿಯ ನೆಟ್ಟು ಪೋಷಿಸಿ ಬೆಳೆಯುವೆವು ಭತ್ತ/
ನಿರಂತರ ಆರೈಕೆಯ ಲಾಭ ಕೈಗೆ ಬಾಯಿಗೆ ಬರುವವು ನಾಳೆ//
ಮುಂದೊಂದು ದಿನ ಎನ್ನುವ ಭರವಸೆ ತರುವ ಖುಷಿ ಸಾಕಷ್ಟು/
ಆಸೆಗಳು ಹುಟ್ಟಿಕೊಂಡು ಸವೆಸಿ ಹಾದಿ ಹಸಿರಾಗುವವೂ ನಾಳೆ//
ಸವಾಲುಗಳಿಗೆ ಎದೆಯೊಡ್ಡಿ ಎದುರಿಸುವ ಛಲದಲ್ಲಿ ಬಿಡದ ಹಂಬಲ/
ಕುಸಿಯದಂತೆ ಎತ್ತಿ ಹಿಡಿಯಬಲ್ಲ ಸಹನೆ ಉಕ್ಕಿನ ಬಲವೂ ನಾಳೆ//
ಭವಿಷ್ಯ ಇಲ್ಲವೆಂದಾದರೆ ಬಾಳು ಎಲ್ಲಾ ಸಮಯ ನರಕ ಯಾತನೆ/
ದಿನಾಲೂ ಅರಳಿ ಬಾಡುವ ಮಲ್ಲಿಗೆ ಮತ್ತೆ ಚಿಗುರುವವು ನಾಳೆ//

ಬಸವರಾಜ ಕಾಸೆ