ಚೇತನವಾಗಿ ಹೊಂದಿ ರೂಪಾಂತರ
ನೆಲ ಮುಗಿಲು ಒಂದಾಗುವಂತೆ ಬೆಳೆದು ಬಿಟ್ಟ|
ಛಂಗನೆ ಹಾರಿ ಮಹಾಸಾಗರ ದಾಟಿ
ವೀರಾವೇಶದಿಂದ ಎದ್ದು ನಿಂತು ಬಿಟ್ಟ||
ಆರಾಧ್ಯ ದೈವವನ್ನೇ ಸೋಲಿಸಿ ಗೆದ್ದ
ರಾಮ ಬಂಟನಿವನು ಶಕ್ತಿಗೆ ಹೆಸರು|
ಹಿಡಿದರೆ ಗದೆ ಭೂಮಿ ಆಟದ ಅಂಗಳ
ರಾಮ ನಾಮವೂ ಆತನ ಉಸಿರು||
ರಾಮನಿರದ ಊರುಂಟು|
ಹನುಮನಿರದೆ ಏನುಂಟು||
ಜೈ ಆಂಜನೇಯ| ಜಯ ಜಯ ಆಂಜನೇಯ||

ಹಣ್ಣೆಂದು ಭಾವಿಸಿ ಬಾಲ್ಯದಲ್ಲಿಯೇ
ಸೂರ್ಯನನ್ನೇ ಹಿಡಿಯ ಹೊರಟ ಅಂಜನಿಪುತ್ರ|
ಹೆದರಿ ದೇವತೆಗಳು ಬೀಸಿದರೂ ಆಯುಧ
ಧೃತಿಗೆಡದ ಹುಟ್ಟಾ ಯೋಧ ವಾಯುಪುತ್ರ||
ರಾಮನ ಬದುಕಲ್ಲಿ ಹನುಮನ ಪ್ರವೇಶ
ಅಸಾಧ್ಯ ಸಾಹಸಗಳ ಯುಕ್ತಿಯ ಗಾಥೆ|
ಪರಿಸ್ಥಿತಿ ತಿಳಿಯಾಗಿಸಿದ ಸುಂದರ ಕಾಂಡ
ಲಂಕೆಯ ದಂಗಾಗಿಸಿದನು ತೆಗೆದು ಕ್ಯಾತೆ||
ರಕ್ಷೆ ಇಂವ ಸಮೃದ್ಧಿ ಇಂವ ಶೌರ್ಯ ಇಂವ||
ಜೈ ಆಂಜನೇಯ| ಜಯ ಜಯ ಆಂಜನೇಯ||
ಎಲ್ಲೆಡೆ ಹುಡುಕಿ ಕಂಡನು ಸೀತೆಯ
ಹೆಣ್ಣೆಂದರೆ ಮಾತೇ ಸಾರಿದನು ಜಗಕ್ಕೆ|
ಜವಾಬ್ದಾರಿ ನಿಭಾಯಿಸುವ ಚಾಣಕ್ಯ
ನಿಷ್ಠನಿವನು ಈಡೇರಿಸಲು ಹಾರೈಕೆ||
ಸಂಜೀವಿನಿ ಪರ್ವತವನ್ನೇ ಒಂದೇ ಏಟಿಗೆ
ಎತ್ತಿ ತಂದ ಆಪತ್ಬಾಂಧವ ವಜ್ರಕಾಯ|
ಹಾಕಿಕೊಂಡರೆ ದುಷ್ಟರು ಇವನ ಎದುರು
ಗ್ರಹಗತಿ ಗ್ರಹಾಚಾರಗಳೇ ಅಯೋಮಯ||
ಏಕಮುಖಿ ಪಂಚಮುಖಿ ಸಹಸ್ರಮುಖಿ||
ಜೈ ಆಂಜನೇಯ| ಜಯ ಜಯ ಆಂಜನೇಯ||
*ಬಸವರಾಜ ಕಾಸೆ*