ಹಾಡಿವೆ ಗಿಡ ಮರಗಳ ಸಾಲು
ಬೆಳೆದು ಚಾಚಿ ನಿಂತು ಬಾನೆತ್ತರ
ದಟ್ಟದವಿಯಲ್ಲಿ ಪ್ರೇಮ ಗೀತೆಯನ್ನಾ
ಮಧುರವಾಗಿ ಮುಗ್ಧತೆಯ ಆಗರ

ಹೊದ್ದಿವೆ ಮಸಕು ಮಸಕಾಗಿ ಮುಸುಕು
ಸಾವಿರ ತಳಿಯ ತೋರಣ ಪಂಜು
ಪ್ರೇಮಿಗಳ ಪ್ರಣಯ ಮರೆ ಮಾಚಿ
ಮತ್ತೆ ಮತ್ತೆ ನಕ್ಕ ಮುಂಜಾವಿನ ಮಂಜು
ಅರಳುತ್ತಿವೆ ಹರ್ಷದಿ ಮೊಗ್ಗು ಹೂವಾಗಿ
ಬಳ್ಳಿ ಬಾಗುವಂತೆ ಮೈದುಂಬಿ
ಆಕರ್ಷಿಸಿ ದುಂಬಿ ತನ್ನಡೆಗೆ
ತನ್ಮಯ ಝೇಂಕಾರ ಮಧು ತುಂಬಿ
ಸೂಸಿವೆ ಹನಿ ಹನಿ ಅಲ್ಲಲ್ಲಿ
ತಬ್ಬಿಬ್ಬುವಾಗುವಂತೆ ತಬ್ಬಿ ಇಬ್ಬನಿ
ತಾಜಾತನದ ಹೊಸ ಕುರುಹಾಗಿ
ಮೃದುತೆಯ ಚಿಲಿಪಿಲಿ ಗಣಿ
ಹುಚ್ಚೆದ್ದಿವೆ ಹದಮಿದ ಹವಾಮಾನ
ಕಂಡು ಕಿಚ್ಚು ಹಚ್ಚುವ ರೋಮಾಂಚನ
ಪುಳಕಿತಗೊಂಡ ವಾತಾವರಣ
ಬದಲಾಗಿ ಬೇರ್ಪಡಿಸಲಿಲ್ಲ ಈ ಮಿಲನ

ಬಸವರಾಜ ಕಾಸೆ