ಉಟ್ಟರೇನು ಯಾವ ಉಡುಗೆ ತೊಡುಗೆ ಹೆಣ್ಣಿನ ಅಂದ ಮಿಂಚುವ ಬೆಳಕು ಸೀರೆ/
ನವಿರು ಭಾವಗಳ ಹೊಮ್ಮಿಸಿ ಮೂಡುವ ಚೆಂದದ ಗುಂಗು ಲಜ್ಜೆಯ ಇಣುಕು ಸೀರೆ//

ಇಳಕಲ್ ಮೈಸೂರು ಮೊಳಕಾಲ್ಮೂರು ಹೆಸರಾದವು ಇಷ್ಟಪಟ್ಟು ತೊಟ್ಟಷ್ಟು ಬಾರಿ/
ಯಾವುದು ರುಚಿಸುವುದು ನಿನಗಾಗಿ ನಿತ್ಯ ನೂರು ವಿನ್ಯಾಸ ಚಂಚಲ ಮಿಣುಕು ಸೀರೆ//
ಕಾಟನ್ ರೇಷ್ಮೆ ಜರತಾರಿ ಸಾವಿರ ವಿಧದ ಬಟ್ಟೆ ನೇಯ್ಗೆಗೆ ನಿನ್ನ ಸಿಂಗಾರದ ಅಮಲು/
ಭಾರದ ಬಯಕೆಗಳ ಹೊತ್ತ ಅತಿ ಹಗುರ ದೊಡ್ಡ ದಡಿಯ ನಿಲ್ಲದ ಬಳುಕು ಸೀರೆ//
ಬಣ್ಣ ಬಣ್ಣಗಳಲ್ಲಿ ಕುಸುರಿ ಕಲೆ ಕಸೂತಿ ಬಂಗಾರದ ಅಂಚು ನಯವಾದ ಸೆಳೆತ/
ಹತ್ತು ಗಜ ಸೀರೆ ಮೇಲ್ಮೈಯ ಹೊಳಪು ಹೊಳೆಯುವ ಬೆಳದಿಂಗಳ ಥಳುಕು ಸೀರೆ//
ವಾರಣಾಸಿ ಬನಾರಸ್ ಕಾಂಜೀವರ್ಂ ಎಲ್ಲ ಬಸಿರು ಜಾರಿ ಹೊದ್ದು ತುಂಬು ತ್ವಚೆ/
ಮತ್ತೆ ಮತ್ತೆ ಆಯ್ಕೆ ಚಂಚಲ ನೆಗೆಯುವ ನಗೆಯ ಅತ್ಯುತ್ಸಾಹದ ಮೆಲುಕು ಸೀರೆ//

ಬಸವರಾಜ ಕಾಸೆ