ಈ ಸಂಜೆ ನಸು ನಕ್ಕು ಕಿವಿಯಲ್ಲಿ ಪಿಸು ನುಡಿ ಮೆಲ್ಲಗೆ/
ಆ ನೆಪದಲ್ಲಿ ಮೃದುವಾಗಿ ತುಟಿ ಒತ್ತೊಮ್ಮೆ ಕಾದಿರುವ ಕೆನ್ನೆಗೆ//

ಹಿಡಿದ ಕೈಯ ಸ್ಪರ್ಶಿಸು ಘರ್ಷಿಸುವಂತೆ ಲಘುವಾಗಿ ತೋಳುಗಳು/
ಬಿಸಿಯುಸಿರ ಬೆಸುಗೆ ಕಾವೇರುವ ಹೊತ್ತು ತಂಗಾಳಿ ಮೈ ಬೆಚ್ಚಗೆ//
ತಲೆಹರಟೆ ಮಾಡು ಬೇಕಾದಷ್ಟು ಚೂರು ಸಲುಗೆ ಕೊಟ್ಟು/
ಬೈದರೂ ಅಡ್ಡಿಯಿಲ್ಲ ಸಡಲಿಸಿ ನಿರ್ಬಂಧ ಸುಮ್ಮನೆ ಬಿಡು ಮಲ್ಲಿಗೆ//
ಸಿಹಿ ಅಧರಗಳ ತುಸು ಒಪ್ಪಿಸಲು ಕಲಿತೆನು ಬಗೆ ಬಗೆಯ ನಾಟಕ/
ಯೋಜನೆ ತಲೆಕೆಳಗಾದರೂ ಮದ ಕೊಸರಿ ಕೊಡುವ ಮುದ ಏಟಿಗೆ//
ಹಾತೊರೆದಿರುವೆ ತಡವರಿಸಿದಿರು ಬಾಚಿ ಬಿಗಿದಪ್ಪಿಕೊ ರೇಗಿ/
ವಿಳಾಸ ಇಲ್ಲದಂತೆ ಇಳಿದು ಹೋಗಲು ಕೊಡು ಸುಪಾರಿ ಸುಸ್ತುಗೆ//
ಕಣ್ಣಲ್ಲಿ ಕಣ್ಣಿಡುವ ಬಯಕೆ ಮಿಂಚುವ ಹುರುಪು ರೆಪ್ಪೆ ಅಂಚಲ್ಲೆ/
ನೀನು ಏನು ಮಾಡಿದರು ಚೆಂದವೆ ಇಷ್ಟವಾಗುವುದು ನನಗೆ//
ಸಾಕು ಎನ್ನುವಂತೆ ಸತಾಯಿಸಿ ಮುತ್ತು ಕೊಡುವೆ ಗೊತ್ತು ಕೊನೆಗೆ/
ಈ ಕ್ಷಣಗಳ ನೆನೆಯುತ್ತಾ ಪುಳಕ ಮತ್ತೆ ನೀ ನಾಳೆ ಸಿಗುವವರೆಗೆ//

ಬಸವರಾಜ ಕಾಸೆ