ಹುಟ್ಟಿನಿಂದ ಒಂದೊಂದಾಗಿ ಶುರುವಾದ ಚಟಗಳು ಇವೆ ಎಲ್ಲರಲ್ಲಿಯೂ ಸಾಕಿ/
ಅತ್ತು ಕರೆದು ಹಠ ಹಿಡಿದು ಪಡೆಯುವ ಮಗು ಚಾಳಿ ಇತ್ತು ನನ್ನಲ್ಲಿಯೂ ಸಾಕಿ//

ಹಾಲು ಕುಡಿಯುವುದಾ ಬಿಡಿಸಲು ಅಮ್ಮ ಬೆರಳ ಚೀಪಿ ಉಗುರು ಕಚ್ಚಲು ಆರಂಭ/
ಬಿಟ್ಟರೆ ಒಂದು ಮನ ಸೆಳೆಯುವುದು ಇನ್ನೊಂದು ಪ್ರತಿಯೊಬ್ಬರಲ್ಲಿಯೂ ಸಾಕಿ//
ತಿಳಿದು ತಿಳಿಯದೆ ಹಚ್ಚಿಕೊಂಡು ಬಿಡುವೆವು ತನ್ನಿಂತಾನೇ ಒಂದಲ್ಲ ಒಂದು/
ಆತ್ಮೀಯರ ಸಮಾಧಾನಕ್ಕೆ ಬಿಡುವ ಆಶ್ವಾಸನೆಯ ಖುಷಿ ಸುಳ್ಳಲ್ಲಿಯೂ ಸಾಕಿ//
ತಿಂದು ಸೇದಿ ಕುಡಿದು ಆಡುವ ನೂರು ದುಶ್ಚಟ ಬಲ್ಲವನೆ ಬಲ್ಲ ಅದರ ಮಜಾ/
ಓದು ಬರೆ ಒಳ್ಳೆಯದಕ್ಕೆ ಹವ್ಯಾಸ ಹೆಸರು ಇರಲಿ ನಲಿವಿದೆ ನೋವಲ್ಲಿಯೂ ಸಾಕಿ//
ಕೊರಗುಗಳ ಚಿಂತೆ ಮರೆಯಲು ನಿಮಿಷದ ನಶೆ ತೊಡೆದು ಹಾಕದು ಏನನ್ನೂ/
ಸಮಸ್ಯೆಯ ಮೂಲವನ್ನು ಬಗೆಯಲು ಸಿದ್ಧನಾದ ಬಸು ನಕ್ಕ ನಿನ್ನಲ್ಲಿಯೂ ಸಾಕಿ//

ಬಸವರಾಜ ಕಾಸೆ