ಇಬ್ಬನಿಯ ಹನಿ ಮೆಲ್ಲಗೆ ಜಾರಿ ನೆನೆದ ಚಿಗುರುಲೆ ಪುಳಕಿತಗೊಂಡಂತೆ/
ಮಮತೆಯ ಮಡಿಲಲ್ಲಿ ಮಿಂದೆದ್ದ ನಗುವಿನ ರೂಪ ಮಗು ಮುದ್ದಾದಂತೆ//



ದೇಹ ರಕ್ತ ಬಸಿದು ಜೀವ ತುಂಬುವ ಜನ್ಮದಾತೆಗೆ ದೇವರೆ ತೊಟ್ಟಿಲ ಮಗು/
ತಂದೆ ತಾಯಿ ಪ್ರೀತಿ ವಾತ್ಸಲ್ಯದ ಪ್ರತೀಕ ಕುಟುಂಬ ಮಮಕಾರದ ಪ್ರತಿಫಲವಂತೆ//
ಕೃಷ್ಣ ಆಗಿರುವನೇನೊ ಭಗವಂತ ಮೊದಲ ಅರಿವಿಗೆ ಸೂಪರ್ ಹೀರೊ ಅಪ್ಪ ಮಾತ್ರ/
ಯಾವ ಧರ್ಮದ ಉಪದೇಶವು ಅವರ ಹಿತಪೋಚಾರಕ್ಕೆ ಸರಿಸಾಟಿಯಾಗದಂತೆ//
ಚೇಳಿಗೆ ಜನಿಸಿದವು ಮರಿಗಳು, ಆಹಾರ ಇರದೆ ತಿನಿಸಿ ತನ್ನ, ಕೊಡುವುದು ಪ್ರಾಣ/
ಗುಟುಕು ನೀಡಿ ತೋರುವ ಆರೈಕೆ ಅಕ್ಕರೆ ಎಂದು ಬತ್ತದ ಅಮೃತದ ಒರತೆಯಂತೆ//
ಇಷ್ಟ ಕಷ್ಟಗಳ ಬದಿಗಿಟ್ಟು ಸಾಕಿ ಬೆಳೆಸಿ ಸಲಹುವರು ಎಲ್ಲವನ್ನೂ ಧಾರೆಯೆರೆದು/
ಹಾರಿ ಹಿಡಿಯುವ ಸನ್ನಾಹದಲ್ಲಿ ಎಗರೆಗರಿ ನಕ್ಕ ಅಪ್ಪುಗೆ ಅಲೆಗಳಿಗೆ ಹುಣ್ಣಿಮೆಯಂತೆ//

ಬಸವರಾಜ ಕಾಸೆ