ಬಂಟ್ವಾಳ: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರವೂ ಬಹುವಾಗಿ ವಿಸ್ತರಣೆಗೊಳ್ಳುತ್ತಿದೆ. ವಿದ್ಯಾರ್ಥಿಗಳು ಪಾರಂಪರಿಕ ಕೋರ್ಸ್ ಗಳ ಜೊತೆಗೆ ಕೌಶಲ ಕೇಂದ್ರಿತ ತಾಂತ್ರಿಕ ಶಿಕ್ಷಣ ಕೋರ್ಸಿನ ಕಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇಂದು ವಿದ್ಯಾರ್ಥಿಗಳು ಹೆಚ್ಚು ಉದ್ಯೋಗವಕಾಶಗಳನ್ನು ಒದಗಿಸುವ ಪದವಿಯ ಕಡೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇಂಟಿರಿಯರ್ ಡಿಸೈನ್ ಪದವಿ ಕೋರ್ಸ್ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹು ಬೇಡಿಕೆಯ ಪದವಿಯಾಗಿದೆ ಎಂದು ಪ್ರಾಧ್ಯಾಪಕ ಪ್ರೊ.ಕಿಶೋರ್ ಕುಮಾರ್ ಹೇಳಿದರು.


ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ “ಬಿ.ಎಸ್ಸಿ ಇಂಟಿರಿಯರ್ ಡಿಸೈನ್ ಆ್ಯಂಡ್ ಡೆಕೊರೇಷನ್: ಅವಕಾಶಗಳು” ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಇಂಟಿರಿಯರ್ ಡಿಸೈನ್ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕೌಶಲ ಕೇಂದ್ರಿತ ಶಿಕ್ಷಣವು ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಸೃಜನಾತ್ಮಕ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯರೂಪಕ್ಕೆ ತರಲು ಇಂಥಹ ಪದವಿಗಳು ಅವಕಾಶವನ್ನು ಒದಗಿಸುತ್ತದೆ. ಹೊಸ ಹೊಸ ತಾಂತ್ರಿಕ ಅನ್ವೇಷಣೆಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸುವ, ಗ್ರಾಹಕರ ಬೇಡಿಕೆಗಳನ್ನು ಪೂರೈಸಬಲ್ಲ ಜನಪ್ರಿಯ ಪದವಿ ಬಿ.ಎಸ್ಸಿ ಇಂಟಿರಿಯರ್ ಡಿಸೈನ್ ಪದವಿಯಾಗಿದೆ. ಹಾಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಾವಕಾಶಗಳನ್ನು ತೆರೆದಿಡುವ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಚೇತನ್ ಮುಂಡಾಜೆ ಸ್ವಾಗತಿಸಿ, ಇಂಟಿರಿಯರ್ ಡಿಸೈನ್ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಜಯ ಜೊಸ್ಲಿ ಅಲ್ಮೇಡಾ ವಂದಿಸಿದರು.