ಬಂಟ್ವಾಳ: ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬಸವ ಶಂಕರ ಅನಾರೋಗ್ಯದಿಂದ ಕೆದ್ದಳಿಕೆಯ ಮನೆಯೊಂದರಲ್ಲಿ ಸೋಮವಾರ ಅಸು ನೀಗಿದೆ.

ಬಸವ ಶಂಕರ ಕಳೆದ 14ವರ್ಷಗಳಿಂದ ಕಾರಿಂಜ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ. ಒಂದು ವರ್ಷ ಪ್ರಾಯದ ಬಸವನನ್ನು ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸಲಾಗಿತ್ತು. ಶಿವ ಕ್ಷೇತ್ರವಾದುದರಿಂದ ಶಂಕರ ಎಂದು ನಾಮಕರಣ ಮಾಡಲಾಗಿತ್ತು. ಸೌಮ್ಯ ಸ್ವಭಾವದ ಶಂಕರ ತನ್ನ ಗಾಂಭೀರ್ಯದಿಂದ ಜಾತ್ರೆ ಸಂದರ್ಭದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ. ಜಾತ್ರೆ ಸಮಯದಲ್ಲಿ ಪ್ರತೀವರ್ಷ ಶಂಕರನಿಗೆ ರಾಜ ಪೋಶಾಕನ್ನು ಕಾವಳಕಟ್ಟೆಯ ದಿನೇಶ್ ಟೈಲರ್ ಅವರು ಸಿದ್ಧಪಡಿಸುತ್ತಿದ್ದರು. ಈ ಬಾರಿಯೂ ಹೊಸ ವಸ್ತ್ರ ತಯಾರಾಗಿತ್ತು. ಕೆಲವು ದಿನಗಳ ಹಿಂದೆ ಶಂಕರನನ್ನು ಆರೈಕೆಗಾಗಿ ಕೆದ್ದಳಿಕೆಗೆ ಕೊಂಡೊಯ್ಯಲಾಗಿತ್ತು. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳಿರುವಾಗ ಶಂಕರ ಮೃತಪಟ್ಟಿದ್ದು ಗ್ರಾಮಸ್ಥರಿಗೆ ದು:ಖವನ್ನುಂಟು ಮಾಡಿದೆ. ಬಸವ ಶಂಕರನ ಅಂತಿಮ ಸಂಸ್ಕಾರವನ್ನು ಕೆದ್ದಳಿಕೆಯಲ್ಲಿ ನೆರವೇರಿಸಲಾಯಿತು.