ಬಂಟ್ವಾಳ: ಕನ್ನಡ ಶಾಲೆಗಳು ಉಳಿಯಬೇಕು, ಮಕ್ಕಳ ಸಂಖ್ಯೆ ಹೆಚ್ಚಾಗಬೇಕು, ಶಿಕ್ಷಣ ನೀಡಬೇಕು ಗುಣಮಟ್ಟದ ಶಿಕ್ಷಣ ನೀಡಬೇಕು ಅದರೆ ಮಕ್ಕಳಿಗೆ ಶಿಕ್ಷಣ ಬೇಕಾದ ಪೂರಕ ವಾತಾವರಣವೂ ಬೇಕು. ಶಾಲೆಗೆ ಬರುವ ಮಕ್ಕಳ ರಕ್ಷಣೆಯೂ ಅಷ್ಟೇ ಅಗತ್ಯವಾಗಿದೆ.
ಸರಕಾರ ಮಕ್ಕಳಿಗೆ ಅನೇಕ ಭಾಗ್ಯಗಳನ್ನು ನೀಡುತ್ತಿದೆ. ಆದರೆ ಅದು ಗ್ರಾಮೀಣ ಭಾಗದ ಮಕ್ಕಳಿಗೆ ಮಾತ್ರ ಮರೀಚಿಕೆಯಾಗಿದೆ.
ಅಂತಹ ಸಮಸ್ಯೆ ಏನಪ್ಪಾ ಅಂದು ಕೊಂಡಿದ್ದೀರಾ.
ಹಾಗಾದರೆ ಬಂಟ್ವಾಳ ತಾಲೂಕಿನ ಮೂಲೆಯಾದ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರ್ಪಾಜೆ ಸರಕಾರಿ ಶಾಲೆಗೆ ಬರುವ ಎಳೆಯ ಮಕ್ಕಳ ಸ್ಥಿತಿಯನ್ನು ನೋಡಬೇಕಾಗಿದೆ.
ಕನ್ಯಾನ ಗ್ರಾ.ಪಂ.ವ್ಯಾಪ್ತಿಯ ನಿರ್ಪಾಜೆ ಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಆ ಶಾಲೆಗೆ ತಾಗಿಕೊಂಡು ಅಂಗನವಾಡಿ ಕೇಂದ್ರವಿದೆ.

ಈ ಶಾಲೆಗೆ ಮತ್ತು ಅಂಗನವಾಡಿಗೆ ಚೆನೈ ಮೂಲೆ ಹಾಗೂ ಅಕ್ಕರೆಕೋಡಿ ಎಂಬಲ್ಲಿನ ಮಕ್ಕಳು ನಡೆದುಕೊಂಡು ಬರಬೇಕಾದ ಸ್ಥಿತಿ.
ಸುಮಾರು ಹತ್ತು ಮಕ್ಕಳು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ ಸುಮಾರು ಮುಕ್ಕಾಲು ಕಿಲೋಮೀಟರ್ ಕಾಲು ದಾರಿಯಲ್ಲಿ ನಡೆದು ಕೊಂಡು ಹೋಗಬೇಕು.
ಈ ದಾರಿಯಲ್ಲದೆ ಬದಲಿ ದಾರಿ ಇಲ್ಲಿನ ಮಕ್ಕಳಿಗೆ ಇಲ್ಲ. ಆದರೆ ಈ ದಾರಿ ಮಾತ್ರ ಮಕ್ಕಳ ಭವಿಷ್ಯದ ಮೇಲೆ ಕೊಳ್ಳಿ ಇಡಲು ಮುಂದಾಗಿದೆ ಎಂಬ ಭಯದಲ್ಲಿ ಮಕ್ಕಳ ಪೋಷಕರಿದ್ದಾರೆ.
ಮುರಿದ ಕಾಲು ಸೇತುವೆ: ಚೆನೈ ಮೂಲೆ ಹಾಗೂ ಅಕ್ಕರಕೋಡಿಯ ಮಕ್ಕಳು ಪಿಲಿಂಗುಳಿ ಎಂಬ ಪ್ರದೇಶದ ಮೂಲಕ ಕಾಲುದಾರಿಯ ಮೂಲಕ ನಡೆದುಕೊಂಡು ಹೋಗಬೇಕು.
ಆದರೆ ಪಿಲಿಂಗುಳಿ ಎಂಬ ಜಾಗದ ಕಾಲು ದಾರಿ ಮಾತ್ರ ಮೃತ್ಯುವಿಗೆ ಅಹ್ವಾನ ನೀಡುತ್ತಿದೆ. ಕಾಲು ದಾರಿಗೆ ತಾಗಿಕೊಂಡು ಮಳೆ ನೀರು ಹರಿದು ಹೋಗುವ ತೋಡು ಇದೆ.
ಕಿರಿದಾದ ಕಾಲು ದಾರಿಯನ್ನು ಯಾವಾಗ ಬೇಕಾದರೂ ಈ ತೋಡು ನುಂಗಿ ಹಾಕಬಹುದು. ಮಳೆಗಾಲವಾದ್ದರಿಂದ ಕಾಲು ದಾರಿ ಜರಿದು ಬೀಳುವ ಬಹುತೇಕ ಲಕ್ಷಣಗಳು ಕಾಣುತ್ತಿವೆ.
ಜೊತೆಗೆ ಈ ತೋಡು ದಾಟಲು ಒಂದು ಕಡೆ ಅಡಕೆ ಮರಗಳನ್ನು ಹಾಕಿ ಕಾಲು ಸೇತುವೆ ಮಾಡಲಾಗಿದೆ ಅದು ಯಾವಾಗಬೇಕಾದರೂ ಮುರಿದು ಬೀಳಬಹುದು.
ಇನ್ನೊಂದು ಕಡೆ ಕಬ್ಬಿಣದ ಶೀಟುಗಳನ್ನು ಹಾಕಿ ಕಾಲು ಸೇತುವೆ ಮಾಡಿದ್ದಾರೆ ಅದು ಕೂಡಾ ತುಕ್ಕುಹಿಡಿದಿದ್ದು ಮುರಿದುಬೀಳುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.
ಆದರೂ ಮಕ್ಕಳು ಇದೇ ದಾರಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಪಾಠ ಕೇಳಲು ಹೋಗಲೇಬೇಕು.
ಒಂದು ವೇಳೆ ಶಾಲಾ ಮಕ್ಕಳು ಹೋಗುವ ವೇಳೆ ಮಳೆಗೆ ದಾರಿ ಜರಿದು ಬಿದ್ದರೆ ಅಥವಾ ಕಾಲು ಸಂಕ ಕಡಿದು ಬಿದ್ದರೆ ಈ ಗ್ರಾಮದಲ್ಲಿ ದೊಡ್ಡ ಅನಾಹುತವೇ ನಡೆಯಬಹುದು.
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮಳೆ ಜೋರು ಬರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಾಲೆಗೆ ರಜೆ ನೀಡುತ್ತಾರೆ .
ಆದರೆ ಇಂತಹ ಗ್ರಾಮೀಣ ಪ್ರದೇಶದ ಭಾಗದಲ್ಲಿ ನಿತ್ಯವೂ ಜೀವಭಯದಲ್ಲಿ ಮಕ್ಕಳು ಶಾಲೆಗೆ ಹೋಗುತ್ತಾರೆ ಅಂದರೆ ಇದು ಯಾವ ನ್ಯಾಯ.
ಗ್ರಾ.ಪಂ.ಗೆ ದೂರು: ಇಲ್ಲಿನ ಮಕ್ಕಳಿಗೆ ಶಾಲೆಗೆ ಹೋಗುವ ದಾರಿ ತೀರಾ ಕಷ್ಟಕರವಾಗಿದ್ದು ಕಾಲು ಸಂಕಕ್ಕೆ ತಡೆ ಹಾಗೂ ದಾರಿಗೂ ತಡೆಗೋಡೆ ಯನ್ನು ನಿರ್ಮಸಬೇಕು ಎಂದು ಸ್ಥಳೀಯರು ಇಲ್ಲಿನ ಗ್ರಾ.ಪಂ.ಗೆ ಲಿಖಿತವಾಗಿ ಮನವಿ ಹಾಗೂ ದೂರು ನೀಡಿದ್ದಾರೆ.
ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ತಡೆಗೋಡೆ ಇಲ್ಲ. ರಸ್ತೆ ಹಾಗೂ ಸುರಕ್ಷಿತ ಸೇತುವೆಯನ್ನು ನಿರ್ಮಿಸಿಕೊಡುವ ಬಗ್ಗೆ ಲಿಖಿತ ಮನವಿ ಗ್ರಾಮ ಪಂಚಾಯತ್ ಗೆ ನೀಡಲಾಗಿದೆ. ಅಲ್ಲದೆ ಗ್ರಾಮ ಸಭೆಯಲ್ಲೂ ಪ್ರಸ್ತಾಪ ಆಗಿದೆ.
ಆದರೂ ಈವರಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂಬುದು ಸಾರ್ವಜನಿಕ ರ ಆರೋಪವಾಗಿದೆ.
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚಿನ ಮುತುವರ್ಜಿಯಿಂದ ಈ ಸಮಸ್ಯೆ ಯನ್ನು ಬಗೆಹರಿಸಲು ಇಲ್ಲಿನ ಸಾರ್ವಜನಿಕರು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ದೊಡ್ಡ ಅನಾಹುತ ನಡೆಯುವ ಮೊದಲು ವೀಕ್ಷಣೆ ನಡೆಸಿ ಸೂಕ್ತವಾದ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.