ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ತ್ಯಾಜ್ಯ ಸಜೀಪನಡು ಗ್ರಾಮ ಪಂಚಾಯತ್ ನ ಕಂಚಿನಡ್ಕ ಪದವಿನ ಸಂಸ್ಕರಣಾ ಘಟಕಕ್ಕೆ ಸಂಸ್ಕರಿಸಲು ಇಂದು ಬುಧವಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಪೋಲೀಸ್ ಭದ್ರತೆಯ ಮೂಲಕ ಕೊಂಡೊಯ್ಯಲು ಸಿದ್ದತೆಗಳು ನಡೆಯುತ್ತಿದೆ.
ಇಂದು ಮಧ್ಯಾಹ್ನದ ಬಳಿಕ ಪುರಸಭೆಯಿಂದ ಒಂದು ಲಾರಿ ಒಣ ತ್ಯಾಜ್ಯವನ್ನು ಕಂಚಿನಡ್ಕ ಪದವಿಗೆ ಕೊಂಡೊಯ್ಯಲು ರೆಡಿಯಾಗಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಘಟಕದ ಸುತ್ತಮುತ್ತ ಸಜೀಪನಡು ಗ್ರಾ.ಪಂ. ಹಾಗೂ ನಜೀಪನಡು ಪೇಟೆಯಲ್ಲಿ ಹೆಚ್ಚಿನ ಪೋಲೀಸ್ ಭದ್ರತೆಯನ್ನು ಮಾಡುತ್ತಿದ್ಧಾರೆ.

ಕಳೆದ ವಾರ ಬಿಸಿರೋಡಿನ ಪುರಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸೋಮವಾರದಿಂದಲೇ ತ್ಯಾಜ್ಯವನ್ನು ಕಂಚಿನಡ್ಕ ಪದವಿಗೆ ಸಂಸ್ಕರಿಸಲು ಆದೇಶ ನೀಡಿದ್ದರು.
ನ್ಯಾಯಾಲಯದ ಅದೇಶದಂತೆ ಕಂಚಿನಡ್ಕ ಪದವಿನ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ಸಂಸ್ಕರಿಸಲು ಅದೇಶವಿರುವುದರಿಂದ ಈ ಘಟಕಕ್ಕೆ ಸೋಮವಾರದಿಂದಲೇ ತ್ಯಾಜ್ಯವನ್ನು ಹಾಕಲು ಅದೇಶ ಮಾಡಿದ್ದರು.
ಅ ಸಂದರ್ಭದಲ್ಲಿ ವಿರೋಧಪಡಿಸುವ ಯಾರೇ ಅದರೂ ಅಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆಯೂ ಸಭೆಯಲ್ಲಿ ತಿಳಿಸಲಾಗಿತ್ತು.
ಆದರೆ ಸಭೆಗೆ ಅಗಮಿಸಿ ಮಾತನಾಡಿದ ಸ್ಥಳೀಯ ಪ್ರಮುಖರು ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ನಮ್ಮ ವಿರೋಧವಿಲ್ಲ ಆದರೆ ಇಲ್ಲಿನ ಜನರ ಸಮಸ್ಯೆಯನ್ನು ನಿವಾರಿಸಿ, ಪರಿಸರ ಇಲಾಖೆ ನೀಡಿದ ನಿಬಂಧನೆಗಳನ್ನು ಅನುಸರಿಸಿ ಬಳಿಕ ಘಟಕದಲ್ಲಿ ತ್ಯಾಜ್ಯ ಸಂಸ್ಕರಿಸಲು ಅವರು ತಿಳಿಸಿದ್ದಾರೆ.
ತ್ಯಾಜ್ಯ ಸಂಸ್ಕರಿಸಲು ಸೋಮವಾರದಿಂದ ಆರಂಭ ಮಾಡುತ್ತಾ ಅಲ್ಲಿನ ಸಮಸ್ಯೆ ನಿವಾರಣೆ ಮಾಡುತ್ತೇವೆ ಎಂದು ಎ.ಸಿ.ಯವರು ಹೇಳಿದ್ದರು.
ಸೋಮವಾರವೇ ತ್ಯಾಜ್ಯ ಸಂಸ್ಕರಣಾ ಮಾಡಲು ಪುರಸಭೆಯ ತ್ಯಾಜ್ಯ ತುಂಬಿದ ವಾಹನ ಬರುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಅಲ್ಲಿನ ಗ್ರಾಮ ಪಂಚಾಯತ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಮೂಲಭೂತ ಸೌಕರ್ಯ ಒದಗಿಸುವ ವರೆಗೆ ನಾವು ತ್ಯಾಜ್ಯ ಸಂಸ್ಕರಿಸಲು ಬಿಡುವುದಿಲ್ಲ, ನಮ್ಮ ವಿರೋಧ ವಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ತಿಳಿಸಿದ್ದಾರೆ.
ಮಧ್ಯಾಹ್ನ ಕಂಚಿನಡ್ಕ ಪದವಿನಲ್ಲಿ ಅಲ್ಲಿನ ನಿವಾಸಿಗಳ ವಿರೋಧ ದ ನಡುವೆಯೂ ಪೋಲೀಸ್ ಭದ್ರತೆಯಲ್ಲಿ ಪುರಸಭೆ ತ್ಯಾಜ್ಯ ಹಾಕಲು ಮುಂದಾಗಿರುವುದರಿಂದ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ

