ಬಂಟ್ವಾಳ: ಕಂಚಿನಡ್ಕಪದವು ಎಂಬಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಸ್ಥಳಿಯ ಶಾಸಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳ ಸಭೆಯನ್ನ ಕರೆಯಲು ಮಂಗಳವಾರ ಸಜಿಪನಡು ಗ್ರಾ.ಪಂ. ಕಚೇರಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ತೀರ್ಮಾನಿಸಿದೆ.


ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸೀರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಸುನೀತಾ ಶಾಂತಿ ಮೊರಾಸ್, ಷಣ್ಮುಖ ಸುಬ್ರಹ್ಮಣ್ಯ ದೇವಾಸ್ಥನದ ಆಡಳಿತ ಮುಖ್ಯಸ್ಥ ವೆಂಕಟೇಶ್ವರ ಭಟ್ ಮುಳ್ಳಿಂಜ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್. ಅಬೂಬಕ್ಕರ್, ಎಸ್.ಡಿ.ಪಿ.ಐ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಹಾಗೂ ವಿವಿಧ ಪಕ್ಷದ ಮುಖಂಡರು, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.
ಈ ವೇಳೆ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಇತ್ತೀಚೆಗೆ ಆಗಿರುವ ಬೆಳವಣಿಗೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಮಂಗಳೂರು ಉಪವಿಭಾಗ ಅಧಿಕಾರಿ ಹಾಗೂ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಏಕಪಕ್ಷೀಯ ತೀರ್ಮಾನ ತಳೆದಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಪರಿಸರ ಮಾಲಿನ್ಯದ ಎಲ್ಲಾ ಶರ್ತಗಳನ್ನು ಪಾಲಿಸಿದ ದಾಖಲೆಯನ್ನು ಬಂಟ್ವಾಳ ಪುರಸಭೆಯವರು ಸಭೆಯಲ್ಲಿ ಮಂಡಿಸಬೇಕು, ಈ ಪ್ರದೇಶದಲ್ಲಿ ಇರುವ ಎಲ್ಲಾ ಧಾರ್ಮಿಕ ಕಟ್ಟಡಗಳು ಮತ್ತು ಸರಕಾರಿ ಕಟ್ಟಡಗಳು ಹಾಗೂ ವಾಸ್ತವ್ಯ ಕಟ್ಟಡಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಭೆ ತೀರ್ಮಾನಿಸಿತು.

