ವಿಟ್ಲ : ವಿಟ್ಲ ಮೂಡ್ನೂರು ಕಂಬಳಬೆಟ್ಟು ಧರ್ಮನಗರ ಭಜನಾ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಯಿತು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಪಕ್ಷದ ಮಂಗಳೂರು ಅಭ್ಯರ್ಥಿ ಬ್ರಿಜೇಷ್ ಚೌಟ ಈ ಬಾರಿ ರಾಷ್ಟ್ರ ಭಕ್ತರ ಹಾಗೂ ದೇಶ ದ್ರೋಹಿಗಳ ನಡುವಿನ ಚುನಾವಣೆಯಾಗಿದ್ದು, ರಾಷ್ಟ್ರದಲ್ಲಿ ಹಿಂದುತ್ವವನ್ನು ಪ್ರತಿಷ್ಠಾಪನೆ ಮಾಡಲು 2024ರ ಚುನಾವಣೆ ಪ್ರಾಮುಖ್ಯತೆಯನ್ನು ಪಡೆದಿದೆ. ರಾಷ್ಟ್ರದ ಚಿಂತನೆ ಇಲ್ಲದೆ ಆಡಳಿತ ಮಾಡಬೇಕೆಂಬ ಕಲ್ಪನೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ವ್ಯಕ್ತಿ ಮುಖ್ಯವಾಗಿರದೆ ಸಮಾಜದ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕು. ಹಿಂದುತ್ವದ ವಿಚಾರಧಾರೆಯಲ್ಲಿ ಬದುಕು ನಡೆಸಿದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಕಾರ್ಯಕರ್ತರ ಬೆಂಬಲ ಇಲ್ಲದೇ ಜಿಲ್ಲೆಯಲ್ಲಿ ಯಾವುದೇ ಕೆಲಸ ಕಾರ್ಯ ಮಾಡಲು ಸಾಧ್ಯವಿಲ್ಲ.
ತುಳುನಾಡಿನ ದೈವ ದೇವರ ಆಶೀರ್ವಾದಿಂದ ಟಿಕೆಟ್ ಲಭಿಸಿದೆ. ಯಾವುದೇ ಭ್ರಮೆಯಲ್ಲಿ ಇರದೇ, ಹಿಂದುತ್ವದ ವಿಚಾರದಲ್ಲಿ ಸ್ಪಷ್ಟವಾಗಿದ್ದೇವೆ. ದಕ್ಷಿಣ ಕನ್ನಡ ದೇವರು ಪ್ರೀತಿಸುವ ಜಿಲ್ಲೆಯಾಗಿದ್ದು, ಇಲ್ಲಿನ ಜನರು ಸಾಮರ್ಥ್ಯವಂತರಾಗಿದ್ದಾರೆ. ಮುಂದಿನ 25 ವರ್ಷ ಭಾರತದ ಅಮೃತ ಕಾಲವಾಗಿದ್ದು, ಜನರಿಗೆ ಸಾಧನೆಗಳಿಗೆ ವೇದಿಕೆ ನೀಡುವ ಕಾರ್ಯ ಮಾಡಲಾಗುವುದು. ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವುದು. ಕಾರ್ಯಕರ್ತರ ಚುನಾವಣೆಯಾಗಿದ್ದು, ಮೋದಿಗೆ ಶಕ್ತಿ ತುಂಬುವ ಕಾರ್ಯವಾಗಬೇಕು. ಕನಸಿನ ದಕ್ಷಿಣ ಕನ್ನಡ ನಿರ್ಮಾಣವನ್ನು ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರಬೇಕು.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಚುನಾವಣೆಯ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಸಮರ್ಥ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ನೀಡಿದ್ದು, 4 ಲಕ್ಷ ಮತದ ಅಂತರದಲ್ಲಿ ಗೆಲ್ಲಿಸಿ ಕೊಡಬೇಕಾಗಿದೆ. ಹತ್ತು ವರ್ಷಗಳಿಂದ ಪಕ್ಷದ ಯೋಚನೆಗಳೊಂದಿಗೆ ದೇಶವನ್ನು ಮುನ್ನಡೆಸುವ ಕಾರ್ಯವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಮುಂದೆಯೂ ಮೋದಿಯವರು ಹಿಂದುತ್ವದ ನೆಲೆಗಟ್ಟಿನಲ್ಲಿ ದೇಶವನ್ನು ಮುನ್ನಡೆಸುವಂತಾಗಬೇಕು. ದಿನದ ಮೂರು ಗಂಟೆ ಪಕ್ಷದ ಕೆಲಸಕ್ಕಾಗಿ ಇಡುವ ಮೂಲಕ ಕೇಂದ್ರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು. ಮುಂದಿನ ವಿಧಾನ ಸಭಾ ಕ್ಷೇತ್ರ ಬಿಜೆಪಿಯದ್ದು ಎಂಬ ರೀತಿಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಚುನಾವಣಾ ಸಂಚಾಲಕ ಚಣಿಲ ತಿಮ್ಮಪ್ಪ ಶೆಟ್ಟಿ, ಸಹ ಸಂಚಾಲಕ ಉಮೇಶ್ ಗೌಡ, ಉಸ್ತುವಾರಿಗಳಾದ ಸುಲೋಚನಾ ಭಟ್, ಶಂಭು ಭಟ್, ಆರ್. ಸಿ. ನಾರಾಯಣ, ಸುನಿಲ್, ಹರೀಶ್, ವಿದ್ಯಾ ಗೌರಿ, ಸಹಜ್ ರೈ, ಅರುಣ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಪ್ರಸ್ತಾವನೆಗೈದರು. ಹರಿಪ್ರಸಾದ್ ಯಾದವ್ ವಂದಿಸಿದರು. ಗೋವಿಂದರಾಜ್, ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.