ವಿಟ್ಲ: ಭಜನೆಯ ಶಕ್ತಿಯಷ್ಟು ಶಕ್ತಿ ಬೇರಾವುದಕ್ಕೂ ಇಲ್ಲ. ಮನಸ್ಸು ಮತ್ತು ಭಾವನೆಯನ್ನು ಒಂದಾಗಿಸಲು ಭಜನೆ ಸಹಕಾರಿಯಾಗುತ್ತದೆ. ಹಿಂದು ಧರ್ಮದ ಉತ್ಥಾನಕ್ಕೆ ಭಜನಾ ಮಂದಿರಗಳು ಪೂರಕ. ಮಕ್ಕಳನ್ನು ಸಂಪತ್ತಾಗಿ ಪರಿವರ್ತಿಸುವ ಕಾರ್‍ಯ ಆಗಬೇಕು ಎಂದು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಕಲ್ಲೆಂಚಿಪಾದೆ ಶ್ರೀ ಮಹಾದೇವಿ ಭಜನಾ ಮಂಡಳಿಯ ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಾರಂಭದ ಧಾರ್‍ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಮನಸ್ಸು ಶುದ್ದವಾಗಿದ್ದಾಗ ಮಾಡಿದ ಕಾರ್‍ಯದಲ್ಲಿ ಶುದ್ಧತೆಯಿರುತ್ತದೆ. ಮನಸ್ಸಿನ ತುಮುಲ ದೂರವಾಗಲು ಭಜನೆ ಸಹಕಾರಿ. ಆರಾಧನೆಯೊಂದಿಗೆ ಒಗ್ಗಟ್ಟಿನಿಂದ ಮುನ್ನಡೆದಾಗ ಯಾವ ಕಾರ್‍ಯವೂ ಸಾಧ್ಯವಾಗುವುದು ಎಂದು ತಿಳಿಸಿದರು.
ಧಾರ್‍ಮಿಕ ಸಭೆಯನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಂಠದೂರು ಮಾತನಾಡಿ ಭಜನೆಯ ಮೂಲಕ ಭಗವಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ತುಳುನಾಡಿನ ಮೂಲ ಜನಾಂಗದಿಂದ ಭಜನಾ ಮಂದಿರ ಆರಂಭಗೊಂಡಿದ್ದು, ಇಲ್ಲಿ ಧರ್ಮಕಾರ್‍ಯದ ಮೂಲಕ ಸಿರಿವಂತಿಕೆ ತುಂಬಿದ್ದಾರೆ ಎಂದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಟಿ. ಜಿ. ರಾಜಾರಾಮ ಭಟ್ ಮಾತನಾಡಿ ಸನಾತನ ಧರ್ಮದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಒಳ್ಳೆಯ ಕೆಲಸಗಳನ್ನು ಟೀಕೆ ಮಾಡುವ ವಿಚಾರವನ್ನು ತಡೆಯುವ ಕಾರ್‍ಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸುವರ್ಣ ಸಂಭ್ರಮದ ಅಂಗವಾಗಿ ಶ್ರೀ ಅನ್ನಪೂರ್ಣೇಶ್ವರಿ ಪಾಕಶಾಲೆಯನ್ನು ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ. ಎಸ್. ಕೃಷ್ಣ ಭಟ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು. ಕಟ್ಟಡ ಕಟ್ಟಲು ನೆರವಾದ ದಾನಿಗಳನ್ನು ಈ ಸಂದರ್ಭ ಗೌರವಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೇದವ, ಆಲಂಗಾರು ಮುಕಾಂಬಿಕಾ ದೇವಸ್ಥಾನದ ಪದ್ಮಿನಿ ರಾಮಭಟ್ ವರ್ಮುಡಿ, ಶ್ರೀದೇವಿ ಮರುಳಚಿಕ್ಕಮ್ಮ ದೇವಸ್ಥಾನ ಮೊಕ್ತೇಸರ ನೋಣಯ್ಯ ಬಂಗೇರ, ಉದ್ಯಮಿ ಕೆ. ಸಂಜೀವ ಪೂಜಾರಿ, ನಲಿಕೆ ಸಮಾಜ ಸೇವಾ ಸಂಘದ ಬೆಳ್ತಂಗಡಿ ಅಧ್ಯಕ್ಷ ಪ್ರಭಾಕರ್, ಮಂಜೇಶ್ವರ ವಲಯ ಅಧ್ಯಕ್ಷ ಎನ್. ಕೃಷ್ಣ ಸೋಮೇಶ್ವರ, ಕೆ. ಸುಂದರ್ ಕಾನತ್ತಡ್ಕ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವಸಂತ ಕುಮಾರ್ ಮಂಗಲ್ಪಾಡಿ, ಕಾನ ಈಶ್ವರ ಭಟ್, ಎಂ. ಡಿ. ವೆಂಕಪ್ಪ ಉಪಸ್ಥಿತರಿದ್ದರು.
ಸುಜನ್ ಕಲ್ಲೆಂಚಿಪಾದೆ ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಪಿ. ಚೆನ್ನಪ್ಪ ಅಳಿಕೆ ಸ್ವಾಗತಿಸಿದರು. ಪ್ರಧಾನ ಕಾರ್‍ಯದರ್ಶಿ ಆನಂದ ಜಿ. ಗುರುವಾಯನಕೆರೆ ವಂದಿಸಿದರು. ಸಹ ಸಂಚಾಲಕ ಜಯರಾಮ ಪಡ್ರೆ ಕಾರ್‍ಯಕ್ರಮ ನಿರೂಪಿಸಿದರು.
