ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಮೂರನೇ ದಿನವಾದ ಫೆ. 23 ರಂದು ಶುಕ್ರವಾರ ಮಾತೃಸಂಗಮ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಜಯನಗರ ಶ್ರೀಭವತಾರಿಣಿ ಆಶ್ರಮದ ಸಾಧ್ವಿ ಮಾತಾ ವಿವೇಕಮಯಿ ಅವರು ಆಶ್ರೀರ್ವಚನ ನೀಡಿ, ರಾಷ್ಟ್ರ ಮಟ್ಟದಲ್ಲಿ ಧಾರ್ಮಿಕ ಚಿಂತನೆಯನ್ನು ಮಾಡುವ ಕೆಲಸ ಶ್ರೀರಾಮಮಾಡಿದ್ದಾನೆ ಎಂಬುದಕ್ಕೆ ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದು ಅವರು ತಿಳಿಸಿದರು. ದೇಶದ ಭವಿಷ್ಯ ಇರುವುದು ತಾಯಂದಿರ ಕೈಯಲ್ಲಿ,ಯುವಜನಾಂಗಕ್ಕೆ ಸರಿಯಾದ ದಿಕ್ಕನ್ನು ತೋರಿಸಿ,ದೇಶವನ್ನು ಸುಭದ್ರ ಶಾಂತಿಯುತ ಅಭಿವೃದ್ಧಿ ಗೆ ಕಾರಣವಾಗುವ ನಿಟ್ಟಿನಲ್ಲಿ ಕೊಂಡೊಯ್ಯಲು ಮಾತೆಯರ ಶಕ್ತಿ ಬೇಕಾಗಿದೆ ಎಂದು ಅವರು ತಿಳಿಸಿದರು.
ದೇಶ ಮತ್ತು ಧರ್ಮ ಎರಡು ಕೂಡ ಅನ್ಯೋನ್ಯ ಸಂಬಂಧವನ್ನು ಹೊಂದಿವೆ.ಜಗತ್ತಿಗೆ ಅದ್ಬುತವಾದ ಕೊಡುಗೆ ಭಾರತ ನೀಡಿದೆ. ವಿಶಾಲವಾದ ಮನೋಭಾವ ಬೆಳೆದು ಧಾರ್ಮಿಕ ವೈಚಾರಿಕತೆಗೆ ಹೊಡೆತ ಬೀಳಬಾರದು , ಈ ಎಚ್ಚರಿಕೆಯ ವ್ಯವಸ್ಥೆಯನ್ನು ನಮ್ಮೊಳಗೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಮನುಷ್ಯನ ಅಸ್ತಿತ್ವ ನಡೆನುಡಿಯನ್ನು ರೂಪಿಸುತ್ತದೆ, ಈ ದೃಷ್ಟಿಯಲ್ಲಿ ಹಿಂದೂ ಪರಂಪರೆಯನ್ನು ಮರೆಯಬಾರದು ಎಂದು ಅವರು ತಿಳಿಸಿದರು.
ಸಚ್ಚಾರಿತ್ರ್ಯ ,ಸಂಸ್ಕಾರ,ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕು ಕಟ್ಟುವ ಕಾರ್ಯಗಳು ಆಗಬೇಕಾದರೆ ಮಹಿಳೆಯರು ಹೆಚ್ಚಿನ ಶ್ರಮ ವಹಿಸಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಜೀವನ ಶೈಲಿಯನ್ನು ಆಧುನಿಕತೆಯನ್ನು ತನ್ನದಾಗಿಸಿಕೊಳ್ಳುವ ಭರದಿಂದ ಭಾರತೀಯತೆಯನ್ನು ಮರೆಯ ಬಾರದು ಎಂದು ಕಿವಿಮಾತು ಹೇಳಿದರು.
ಡಾ| ಕಮಲಾಪ್ರಭಾಕರ್ ಭಟ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಾಯಿ ಕೆ.ಆರ್.ಅನುರಾಧ ವೆಂಕಟೇಶ್ ಮಾತನಾಡಿ, ರಾಷ್ಟ್ರೀಯತೆ ಮತ್ತು ದೇಶಪ್ರೇಮಕ್ಕಿಂತ ಹೆಚ್ಚಾಗಿ ಉಳಿದ ಚಟುವಟಿಕೆಗಳಿಗೆ ನಾವು ಪ್ರಾಧಾನ್ಯತೆ ಕೊಡುವುದು ಬೇಸರ ತರುವಂತಹ ವಿಚಾರವಾಗಿದೆ.
ದೇಶ ಪ್ರೇಮ ಎನ್ನುವಂತಹದ್ದು ಮನೆಮಠಗಳಲ್ಲಿ ತುಂಬಿ ತುಳುಕಿದರೆ ಮಾತ್ರ ಸೈನಿಕರ ಬಲಿದಾನಕ್ಕೆ ಅರ್ಥ ಬರಬಹುದು. ಕ್ಲಿಷ್ಟಕರವಾದ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಟ ಮಾಡಿ ಸೈನಿಕರ ಬಲಿದಾನವಾಗುವ ದಿನಗಳು ಆದಷ್ಟು ಬೇಗ ಬರಲಿ ಎಂಬುದು ನಮ್ಮ ಪ್ರಾರ್ಥನೆ ಎಂದು ಅವರು ತಿಳಿಸಿದರು.
ಶತಾಬ್ದಿ ಸಮಿತಿ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್ ಭಟ್, ಶತಾಬ್ದಿ ಸಂಭ್ರಮ ಸಮಿತಿ ಕಾರ್ಯದರ್ಶಿಗಳಾದ ಲಖಿತಾ ಆರ್.ಶೆಟ್ಟಿ,ಶೋಭಾ ಶಿವಪ್ಪ, ಮಮತಾ ಗೌಡ, ಲಕ್ಮೀ ವಿ.ಪ್ರಭು ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಬೆಳಿಗ್ಗೆ 9.30 ಕ್ಕೆ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಬಳಿಕ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಅರ್ಪಣೆ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಸೌಮ್ಯ ಸ್ವಾಗತಿಸಿ, ಶತಾಬ್ದಿ ಸಮಿತಿ ಕಾರ್ಯದರ್ಶಿ ಲಖಿತಾ ಆರ್ ಶೆಟ್ಟಿ ವಂದಿಸಿದರು.
ಶುಭಲಕ್ಮೀ ಕಾರ್ಯಕ್ರಮ ನಿರೂಪಿಸಿದರು.