ಬಂಟ್ವಾಳ: ವಿಭಿನ್ನ ಚಿಂತನೆಯ ಮೂಲಕ ಬೆಳೆಯುತ್ತಿರುವ ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮ ಕಾರ್ಯಕ್ರಮ ಫೆ.21 ರಿಂದ ಫೆ.24 ರ ವರೆಗೆ ಮಂದಿರದಲ್ಲಿ ನಡೆಯಲಿದೆ ಎಂದು ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಕಲ್ಲಡ್ಕ ಡಾ: ಪ್ರಭಾಕರ್ ಭಟ್ ಅವರು ತಿಳಿಸಿದರು.

ಶತಾಬ್ದಿ ಕಾರ್ಯಕ್ರಮದಲ್ಲಿ ನೂತನವಾಗಿ ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠೆ, ಮಂದಿರದ ಮೇಲ್ಚಾವಣಿಯ ಉದ್ಘಾಟನೆ ಹಾಗೂ ಮಾತೃ ಸಂಗಮ ಕಾರ್ಯಕ್ರಮ ವಿಭಿನ್ನವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
ಫೆ.21 ರಂದು ಬುಧವಾರ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ತೀರ್ಥ ಕಲಶಗಳನ್ನು ಮಂದಿರಕ್ಕೆ ತರಲಾಗುತ್ತದೆ.
ಶ್ರೀ ರಾಮವಿದ್ಯಾಕೇಂದ್ರದ ಮಕ್ಕಳಿಂದ ಸರಸ್ವತಿ ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಮಂದಿರದ ಸುತ್ತಮುತ್ತಲಿನ ಭಾಗದಿಂದ ಆಗಮಿಸಿದ ಹೊರಕಾಣಿಕೆ ನರಹರಿ ಪರ್ವತ ಧ್ವಾರದಿಂದ ಮಂದಿರದವರೆಗೆ ವೈಭ ಮೆರವಣಿಗೆ ಮೂಲಕ ಆಗಮನವನ್ನು ಸ್ವಾಗತಿಸಿಲಿದ್ದೇವೆ.
ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ. 22 ರಂದು ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮಾಂಗಣ ಲೋಕಾರ್ಪಣೆ ಕಾರ್ಯಕ್ರಮ.
ಫೆ.23 ರಂದು ಮಾತೃ ಸಂಗಮ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ.
ಫೆ. 24 ರಂದು 13 ಕೋಟಿ ರಾಮನಾಮ ತಾರಕ ಜಪಯಜ್ಞ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಹಿರಿಯರ ಪ್ರಕಾರ ಗಣಪತಿಯ ಇರುವಿಕೆಯು ಗೋಚರಕ್ಕೆ ಬಂದ ಹಿನ್ನೆಲೆಯಲ್ಲಿ ,ವಾಸ್ತು ತಜ್ಞರ ಸಲಹೆಯ ಮೇರೆಗೆ,
ಪ್ರಶ್ನಾ ಚಿಂತನೆಯ ಪ್ರಕಾರ ಗಣಪತಿ ಪ್ರತಿಷ್ಟಾಪನೆ ಮಾಡಲಾಗುತ್ತದೆ.
6 ಅಡಿ 2 ಇಂಚು ಎತ್ತರದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಿದ್ದೇವೆ.
ರಾಮ ಮಂದಿರ ಅನೇಕ ರಾಷ್ಟ್ರೀಯ ಹೋರಾಟಗಳಲ್ಲಿ ಭಾಗಿಯಾಗಿ, ಸಾಮಾಜಿಕ ಕಾರ್ಯಗಳಿಗೆ ಸಾಕ್ಷಿಯಾಗಿದೆ.
ರಾಮಮಂದಿರದ ಪ್ರೇರಣೆಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆ ಹುಟ್ಟಿಕೊಂಡಿದ್ದು, ಇದೀಗ ರಾಷ್ಟ್ರೀಯ ಚಿಂತನೆಯ ಶಿಕ್ಷಣದ ಮೂಲಕ ದೇಶದಲ್ಲಿ ಹೆಸರು ಪಡೆದಿದೆ.
ಇದರ ಜೊತೆಗೆ ಕಲ್ಲಡ್ಕದಿಂದ ಎರಡು ಶಾಸಕರಾಗಿ ಆಯ್ಕೆಯಾಗಿರುವುದು ಇದೇ ರಾಮನ ಕೃಪೆಯಿಂದ ಎಂದು ಅವರು ತಿಳಿಸಿದರು.
ದೇವ ಮತ್ತು ದೇಶ ಎರಡು ಚಿಂತನೆಯನ್ನು ಈ ರಾಮಮಂದಿರಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಪಡೆಯಬೇಕು ಎಂಬ ಯೋಚನೆ ನಮ್ಮದಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ನಾರಾಯಣ ಸೋಮಯಾಜಿ, ಚೆನ್ನಪ್ಪ ಆರ್.ಕೋಟ್ಯಾನ್, ನಾಗೇಶ್ ಕಲ್ಲಡ್ಕ ಉಪಸ್ಥಿತರಿದ್ದರು.