ಬಂಟ್ವಾಳ: ಕಲ್ಲಡ್ಕ ಶ್ರೀರಾಮಮಂದಿರದ ವೈಶಿಷ್ಟ್ಯ, ವಿಚಾರಗಳು ದೇಶಕ್ಕೆ ಮಾದರಿಯಾಗಿದ್ದು,ಇನ್ನಷ್ಟು ಹೊಸ ಹೊಸ ಚಿಂತನೆಗಳಿಗೆ ಅವಕಾಶ ನೀಡುತ್ತಾ ಎತ್ತರಕ್ಕೆ ಬೆಳೆಯಲಿ ಎಂದು ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ವಿದ್ಯಾಗಣಪತಿ ದೇವರ ಪ್ರಾಣಪ್ರತಿಷ್ಠೆ ಮಾಡಿದ ಕೊಲ್ಹಾಪುರ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಫೆ.21 ರಿಂದ ಫೆ. 24 ರವರೆಗೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆಯುವ ಶತಾಬ್ದಿ ಸಂಭ್ರಮ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಆಶ್ರೀರ್ವಚನ ನೀಡಿದರು.
ಶ್ರೀರಾಮನ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತದ ನಿರ್ಮಾಣ ಕಾರ್ಯದಲ್ಲಿ ಜೋಡಿಸಿಕೊಂಡು,ಧರ್ಮದ ಕಾರ್ಯಕ್ಕಾಗಿ ನಮ್ಮನ್ನು ನಾವು ಅರ್ಪಿಸುವ ಎಂದು ತಿಳಿಸಿದರು.
ಮಂದಿರಗಳು ದೇಶವನ್ನು ಸುಭದ್ರಗೊಳಿಸುವುದಕ್ಕೆ ಕಾರಣವಾಗಿದೆ. ಶ್ರೀರಾಮನ ವಿದ್ಯಾಲಯದ ವಿದ್ಯಾರ್ಥಿಗಳು ನವ ಭಾರತದ ನಿರ್ಮಾಣಕ್ಕೆ ಮೂಲಕಾರಣವಾಗುತ್ತಾರೆ ಎಂದ ಅವರು, ಭಿನ್ನವಾದ ಕಲೆ,ಸಂಸ್ಕಾರದ ವಿದ್ಯಾರ್ಥಿಗಳು ದೇಶಕ್ಕೆ ಸಂಪತ್ತು ಆಗುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಧ್ವಜಾರೋಹಣ ಲೋಕಾರ್ಪಣೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದ ಬೆಳಗಾವಿ ನಿಡಸೋಸಿ ಸಿದ್ದಸಂಸ್ಥಾನ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ದಸಂಸ್ಥಾನ ಮಠದ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳಿಂದ ದೇಶ ನಿರ್ಮಾಣ,ಧರ್ಮದ ಕಾರ್ಯಕ್ಕೆ ಚೈತನ್ಯ ನೀಡುತ್ತದೆ, ರಾಷ್ಟ್ರ ನಿರ್ಮಾಣ ಮಾಡಲು ಶಕ್ತಿ ನೀಡುತ್ತದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದಿಂದ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿಯಾಗಿದೆ. ಕಲ್ಲಡ್ಕ ಶ್ರೀರಾಮನ ಪ್ರೇರಣೆಯಿಂದ ನೈಜ ಅರ್ಥದಲ್ಲಿ ಸ್ವಾಭಿಮಾನದ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
ಶ್ರೀರಾಮನ ಜೊತೆಗೆ ವಿದ್ಯಾಗಣಪತಿ ದೇವರ ಪ್ರತಿಷ್ಟಾಪನೆಯಿಂದ ಕಲ್ಲಡ್ಕಕ್ಕೆ ಮತ್ತೊಂದು ಗರಿ ಬಂದಿದೆ ಎಂದು ಅವರು ತಿಳಿಸಿದರು.
ಧಾರ್ಮಿಕ ಮನೋಭಾವನೆ ಜಾಸ್ತಿಯಾಗುತ್ತಿದ್ದು,ವೈಜ್ಞಾನಿಕವಾದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ ದಳಂದಿಲ ಅವರು ಶ್ರೀರಾಮಾಂಗಣದ ನಾಮಫಲಕ ಅನಾವರಣಗೊಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಸಂಘಪರಿವಾರದ ಹಿರಿಯರ ಮುಂದಾಳತ್ವದಲ್ಲಿ ನಡೆದ ರಾಷ್ಟ್ರೀಯ ಹೋರಾಟದ ತಾರ್ಕಿಕ ಅಂತ್ಯ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ಜಾತಿ ಮತ್ತು ಅಸ್ಪ್ರಶ್ಯತೆ ಎಂಬ ಮೂಢನಂಬಿಕೆಯ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಡಾ| ಪ್ರಭಾಕರ್ ಭಟ್,ಬೌದ್ದಿಕವಾಗಿ ಎದ್ದು ನಿಲ್ಲದೆ, ಶ್ರೀರಾಮನ ಭಕ್ತಿ ಶಕ್ತಿಯಾಗಿ ಪರಿವರ್ತಿತವಾದ ಕಲ್ಲಡ್ಕ ಶ್ರೀರಾಮನ ಮಂದಿರ ಅನೇಕ ರಾಷ್ಟ್ರೀಯ ಚಿಂತನೆಯ ಹೋರಾಟಗಳಿಗೆ ಮುನ್ನುಡಿ ಬರೆದಿದೆ. ಕಲ್ಲಡ್ಕ ಶ್ರೀರಾಮ ಮಂದಿರ ಹಾಗೂ ಆಧುನಿಕ ಶಿಕ್ಷಣ ನೀಡುವ ದೇಶದ ಏಕಮಾತ್ರ ಕನ್ನಡ ಮಾಧ್ಯಮ ಶಾಲೆ ಶ್ರೀರಾಮ ವಿದ್ಯಾಕೇಂದ್ರ ಸಾಮಾಜಿಕ ಪರಿವರ್ತನೆಗೆ ಕಾರಣವಾಯಿತು ಎಂದು ಅವರು ತಿಳಿಸಿದರು.
ಅನೇಕ ವಿರೋಧಗಳ ನಡುವೆ ಕಲ್ಲಡ್ಕ ದಲ್ಲಿ ಶ್ರೀರಾಮನ ಪ್ರೇರಣೆ ಹಾಗೂ ಆಶಯದಂತೆ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಜ್ಞಾನಾರ್ಜನೆ ನಡೆಯುತ್ತಿದೆ.
ಯುವ ಜನತೆಯಲ್ಲಿ ಭಾವನೆಯನ್ನು ಹೆಚ್ಚುಹೆಚ್ಚು ಜಾಗೃತಗೊಳಿಸುವ ಉದ್ದೇಶದಿಂದ ಮತ್ತು ಮಂದಿರಕ್ಕೆ ಬರುವ ಭಕ್ತಾದಿಗಳಿಗೆ ಮಳೆಬಿಸಿಲಿನಿಂದ ರಕ್ಷಣೆ ನೀಡಬೇಕು ಎಂಬ ದೃಷ್ಟಿಯಿಂದ ಶ್ರೀರಾಮನ ಮಂದಿರಕ್ಕೆ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಮೇಲ್ಚಾವಣಿಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದರ ಜೊತೆಗೆ ಪೂರ್ವ ಇತಿಹಾಸದ ಪ್ರಕಾರ 6 ಅಡಿ ಎರಡು ಇಂಚು ಎತ್ತರದ ಬಾಲಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಮಂಗಳೂರು ಮಹಾ ನಗರದ ಸಹಸಂಘ ಚಾಲಕ ಸುನಿಲ್ ಆಚಾರ್ಯ, ಉದ್ಯಮಿ ಸುಧಾಕರ ಶೆಟ್ಟಿ , ಮುಂಬಯಿ , ಮುಂಬಯಿ ಉದ್ಯಮಿ ಬಾಲಕೃಷ್ಣ ಭಂಡಾರಿ,ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ , ಪೌರೋಹಿತ್ಯ ನೆರವೇರಿಸಿದ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ 7 ಗಂಟೆಗೆ 108 ತೆಂಗಿನಕಾಯಿ ಗಣಪತಿ ಹವನ, ಅಥರ್ವಶೀರ್ಷ ಹವನ, ಪ್ರತಿಷ್ಠಾಂಗ ಹವನ, ಭಜನೆ ಕಾರ್ಯಕ್ರಮಗಳು ನಡೆಯಿತು.
ಶತಾಬ್ದಿ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ವಂದಿಸಿದರು.
ರಾಜೇಶ್ ಕೊಟ್ಟಾರಿ ಮತ್ತು ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿದರು.