ಬಂಟ್ವಾಳ: ಯೋಚನೆಗಳ ವಿಸ್ತಾರಕ್ಕೆ ರಂಗಕಲೆ ಪ್ರೇರಣೆ ನೀಡುತ್ತದೆ, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ನಮ್ಮೊಳಗಿನ ಸೃಜನಶೀಲತೆ ಬೆಳೆಯಲು ಸಾಧ್ಯ ಎಂದು ಯುವ ರಂಗನಿರ್ದೇಶಕ ಧನರಾಜ್ ಮಾಮೇಶ್ವರ ಹೇಳಿದರು. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ಕಲ್ಲಡ್ಕ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿರುವ ಕಲಿಕಲಿಸು ಕಲಾ ಅಂತರ್ಗತ ಪ್ರಯೋಗದ ಕಲಾಬರಹ ಕಲಾಪತ್ರಿಕೆ ಚಟುವಟಿಕೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ “ಆಟ ರಂಗಾಟ” ಕುರಿತಾದ ತರಗತಿ ನಡೆಸಿದರು. ರಂಗ ನಾಟಕದ ಕುರಿತಾಗಿ ವಿವಿಧ ಸಾಧ್ಯತೆಗಳನ್ನು, ಆಟ ರಂಗಾಟಗಳ ವಿಚಾರಗಳನ್ನು ಚಟುವಟಿಕೆಯಾಧಾರಿತವಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕುತೂಹಲ ಮತ್ತು ಆಸಕ್ತಿಯೊಂದಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡರು. ಐಎಫ್ಎ ಗ್ರ್ಯಾಂಟಿ ಮೌನೇಶ ವಿಶ್ವಕರ್ಮ, ಮಾರ್ಗದರ್ಶಿ ಶಿಕ್ಷಕಿ ಸೌಮ್ಯ ಎ. ಉಪಸ್ಥಿತರಿದ್ದರು.

