ಬಂಟ್ವಾಳ : ಪ್ರತಿಫಲಾಪೇಕ್ಷೆ ಇಲ್ಲದೆ ಸಹಜಭಾವದಿಂದ ಮಾಡುವ ಸೇವೆಯೇ ನಿಜವಾದ ಸೇವೆ. ದೇಶದ ಮಾನವೀಯ ಆಧಾರಸ್ಥಂಭವು ಸೇವೆ ಮತ್ತು ತ್ಯಾಗ. ಸೇವೆಯನ್ನು ಜೀವನದ ಹವ್ಯಾಸ ಮತ್ತು ಮನೋಭಾವದಿಂದ ಬೆಳೆಸಿದರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ವಾಗುವುದು. ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರ ಮನಸ್ಸು ವಿಶಾಲವಾಗಿದ್ದು, ಕಿವಿ ಸದಾ ಸಮಾಜದ ಸೇವೆಗಾಗಿ ತೆರೆದಿರಬೇಕು ಎಂದು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿನ ಪ್ರಾಧ್ಯಾಪಕ ವಿನೋದ್ ಶೆಟ್ಟಿ ನುಡಿದರು.


ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾಯೋಜನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೇವೆ-ಭಾರತೀಯ ಪರಿಕಲ್ಪನೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ವಹಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ಉಪನ್ಯಾಸಕ ಯತಿರಾಜ್, ಯೋಜನಾಧಿಕಾರಿಯಾದ ಹರೀಶ್, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ತನ್ನ ಜೀವನವನ್ನು ಸಮಾಜದ ಸೇವೆಗೆ ಮುಡಿಪಾಗಿಟ್ಟ ವ್ಯಕ್ತಿತ್ವದ ಪರಿಚಯ ಮತ್ತು ಮಾಹಿತಿಯನ್ನು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮವನ್ನು ಹಿತೇಶ್ ಪ್ರಥಮ ಬಿ.ಕಾಂ ಸ್ವಾಗತಿಸಿ, ಹರ್ಷಿತಾ ಪ್ರಥಮ ಬಿ.ಕಾಂ ವಂದಿಸಿ, ಧನ್ಯಶ್ರೀ ಪ್ರಥಮ ಬಿ.ಕಾಂ ಇವರು ನಿರೂಪಿಸಿದರು.

