ಕಲ್ಲಡ್ಕ: ಜ.16 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಮಕರ ಸಂಕ್ರಮಣ ಕಾರ್ಯಕ್ರಮವನ್ನು ಆಚರಿಸಲಾಯಿತು.
ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸಿತ್ತಿದ್ದಂತೆಯೇ ಉತ್ತರಾಯಣ ಅಡಿಯಿಡುತ್ತದೆ. ಈ ಹಬ್ಬದಂದು ಎಳ್ಳು – ಬೆಲ್ಲ ಹಂಚಿ, ಪರಸ್ಪರ ದ್ವೇಷ ಅಸೂಯೆ, ಶತ್ರುತ್ವಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕುವ ಪ್ರತಿಜ್ಞೆ ಮಾಡುವ ದಿನ. ನಾವು ಅದೇ ರೀತಿ ದ್ವೇಷ, ಅಸೂಯೆ, ಮರೆತು ಸಾಮರಸ್ಯದಿಂದ ಬದುಕುವ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಎಂದು ಅತಿಥಿಯಾಗಿ ಆಗಮಿಸಿದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪದವಿ ವಿಭಾಗದ ಉಪನ್ಯಾಸಕಿಯಾದ ಲತಾ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಅಥಿತಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. 7ನೇ ತರಗತಿಯ ವಿದ್ಯಾರ್ಥಿನಿಯರು ಪ್ರೇರಣಾ ಗೀತೆ ಹಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ ನೀಡಿ ಮಕರ ಸಂಕ್ರಮಣದ ಶುಭಹಾರೈಸಲಾಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಚೈತ್ರ ನಿರೂಪಿಸಿ, ಅಶ್ವಿನಿ ಸ್ವಾಗತಿಸಿ, ರೇಷ್ಮಾ ವಂದಿಸಿದರು.

