ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪದವಿ ಕಾಲೇಜಿನ ಆಶ್ರಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾಲಯ , ಮಂಗಳಗಂಗೋತ್ರಿ ಮಂಗಳೂರು ಇವರ ಸಹಯೋಗದೊಂದಿಗೆ “ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ” ಎಂಬ ವಿಷಯದಡಿಯಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಜೂನ್ 20 ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ,ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಅವರು ತಿಳಿಸಿದರು.

ಭಾರತೀಯ ಸಂಸ್ಕೃತಿಯ ನ್ನು ಪಸರಿಸುವ ನಿಟ್ಟಿನಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆ ಪ್ರಾರಂಭವಾಗಿದೆ.ಸುಮಾರು 3.500 ಸಾವಿರ ವಿದ್ಯಾರ್ಥಿಗಳು ಇರುವ ಅತೀ ದೊಡ್ಡ ವಿದ್ಯಾಸಂಸ್ಥೆ ಇದಾಗಿದೆ ಎಂದು ಅವರು ತಿಳಿಸಿದರು.
ಕಲಿಕೆಯ ಜೊತೆ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಪ್ರತಿವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸುತ್ತಾ ಬಂದಿದೆ.ಭಾರತೀಯ ಸಂಸ್ಕೃತಿಯ ವಿಚಾರದಲ್ಲಿ ಕಾಲೇಜುಗಳಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು ಆಯೋಜನೆ ಮಾಡುವುದು ಕಡಿಮೆ, ಹಾಗಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಸಂಕಿರಣ ಆಯೋಜಿಸುವ ಯೋಚನೆ ಮಾಡಿದ್ದೇವೆ
ಮಾಜಿ ಶಾಸಕ , ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿ ಕೆ.ಪದ್ಮನಾಭ ಕೊಟ್ಟಾರಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ದಲ್ಲಿ ವಿಚಾರ ಸಂಕಿರಣ
ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನ ಆಧಾರದ ಮೇಲೆ, ಶ್ರೀರಾಮಚಂದ್ರನ ಆದರ್ಶಗಳನ್ನು ಮೈಗೂಡಿಸಿಕೊಂಡು, ಕಳೆದ 38 ವರ್ಷಗಳಿಂದ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಕೆಲಸವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ನಡೆಸುತ್ತಿದೆ. 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು, 150ಕ್ಕೂ ಹೆಚ್ಚು ಶಿಕ್ಷಕ ವೃಂದ, 50ಕ್ಕೂ ಹೆಚ್ಚು ಇತರ ಸಹಕಾರಿ ವೃಂದವನ್ನು ಹೊಂದಿರುವ ಈ ಸಂಸ್ಥೆ ಶಿಶುಮಂದಿರದಿಂದ ಪದವಿ ಕಾಲೇಜಿನವರೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ಆಯಾ ವಯೋಮಾನಕ್ಕನುಗುಣವಾಗಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಇತರ ಗುಣಗಳನ್ನು ಬೆಳೆಸಲು ಬೇಕಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈ ಪೈಕಿ ‘ ಯುವಪೀಳಿಗೆಯಲ್ಲಿ ಸಮಾಜಪಜ್ಜೆ, ರಾಷ್ಟ್ರಪ್ರಜ್ಞೆಯನ್ನು ಬಿತ್ತಿ ಬೆಳೆಸುವ ನಮ್ಮ ಮಹತ್ತರ ಯೋಜನೆಯನ್ವಯ ಪ್ರತಿ ತಿಂಗಳು ಚಿಂತನೆ ಕೂಟ, ವರ್ಷಕ್ಕೊಮ್ಮೆ ವಿಚಾರಸಂಕಿರಣ ಬಹಳ ಮಹತ್ವದ್ದಾಗಿದೆ.
2009-10ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಪದವಿ ವಿಭಾಗದ ಆರಂಭಿಕ ದಿನಗಳಿಂದಲೂ, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ವಿಚಾರಸಂಕಿರಣವೊಂದನ್ನು ಆಯೋಜಿಸುತ್ತಾ ಬಂದಿದೆ. ವಿಶ್ವ ವಿದ್ಯಾನಿಲಯಗಳ, ಎಲ್ಲಾ ಕಾಲೇಜುಗಳಲ್ಲೂ ಯುಜಿಸಿ ಪ್ರಾಯೋಜಿತ ಆನೇಕ ವಿಚಾರಸಂಕಿರಣಗಳು ನಡೆಯುತ್ತದೆಯಾದರೂ, ಅವೆಲ್ಲಕ್ಕೂ ಭಿನ್ನವಾದ ಇಂದಿನ ಅನಿವಾರ್ಯತೆಗಳನ್ನು ಪೂರೈಸುವ ವಿಚಾರಗಳನ್ನು ತಿಳಿಸುವ ವಿಚಾರಸಂಕಿರಣ ಇದಾಗಿದೆ.
ಹಿಂದಿನ ವಿಚಾರಸಂಕಿರಣಗಳ ಕಿರುನೋಟ
ಆರಂಭಿಕ ವರ್ಷಗಳಲ್ಲಿ ರಾಷ್ಟ್ರ ರಾಷ್ಟ್ರೀಯರು ಮತ್ತು ನಮ್ಮ ರಾಷ್ಟ್ರೀಯತೆ ಎಂಬ ವಿಚಾರದಿಂದ ಆರಂಭಗೊಂಡ ಈ ವಿಚಾರಸಂಕಿರಣ ಮುಂದಿನ ದಿನಗಳಲ್ಲಿ ದೇಶದ ಭದ್ರತೆಗಿರುವ ಸವಾಲುಗಳು ಎಂಬ ವಿಷಯದಡಿ ಚೀನಾ, ಪಾಕಿಸ್ತಾನ, ಕಾಶ್ಮೀರಗಳ ಗಡಿಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದುದಷ್ಟೇ ಅಲ್ಲದೇ ಅದೇ ದಿನ ದೇಶ ವಿಭಜನೆಯೂ ನಡೆಯಿತೆಂಬ ವಾಸ್ತವ ಸತ್ಯ ಮೂರನೆಯ ವಿಚಾರಸಂಕಿರಣವಾದ ‘ದೇಶವಿಭಜನೆಯಿಂದ ಸ್ವರಾಜ್ಯವೋ ಸ್ವರಾಜ್ಯಕ್ಕಾಗಿ ದೇಶ ವಿಭಜನೆಯೋ ಎಂಬ ವಿಷಯದಿಂದ ನನ್ನ ಗಮನಕ್ಕೆ ಬಂತು ಎಂಬ ಪದವಿ ವಿಭಾಗದ ವಿದ್ಯಾರ್ಥಿಯೊಬ್ಬ ಆನಿಸಿಕೆ ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಭಾರತದ ಮುಂದಿರುವ ಸವಾಲುಗಳಷ್ಟೇ ಅಲ್ಲದೇ ಭಾರತ ಹೇಗೆ ವಿಶ್ವವಂದ್ಯ ಸ್ಥಾನವನ್ನು ಪಡೆಯಿತು ಎಂಬುದನ್ನು ಮನಗಾಣಿಸಲು ವಿಶ್ವವಂದ್ಯ ಭಾರತದ ಸಾಧನಾ ಪಥ ಎಂಬ ವಿಷಯವನ್ನು ಆಯ್ಕೆ ಮಾಡಲಾಯಿತು. DRDO ವಿಜ್ಞಾನಿ ಸುಧೀಂದ್ರ ಹಾಲೊಡ್ತೀರಿ, ವಿ. ನಾಗರಾಜ್ ಮುಂತಾದ ಹಿರಿಯರು ಅವಧಿಗಳನ್ನು ತೆಗೆದುಕೊಂಡಿದ್ದರು.
2014ರಲ್ಲಿ ದೇಶದಲ್ಲಿ ಉಂಟಾದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿವರ್ತನೆಯ ಹಿಂದಿನ ಜನಮಾನಸಿಕತೆಯ ಬಗೆಗೆ ಸಂಸದರಾದ ಪ್ರತಾಪ ಸಿಂಹ ಹಾಗೂ ಸಾಮಾಜಿಕ ಜಾಲತಾಣದ ಸಮೀಕ್ಷಕರಾದ ಕಿರಣ್ ಕೆ. ಎಸ್. ಹಾಗೂ ಸಾಮಾಜಿಕ ಕಾರ್ಯಕರ್ತ ವಾದಿರಾಜರು ನಡೆಸಿಕೊಟ್ಟ ಅವಧಿಗಳು ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ಆಗ ಪ್ರತಿನಿಧಿಸಿದ ಮಂಗಳೂರು ವಿಶ್ವವಿದ್ಯಾನಿಲಯದ 55 ಕಾಲೇಜುಗಳ ಪತ್ರಿನಿಧಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡು ಇನ್ನಷ್ಟು ಇದರ ವ್ಯಾಪ್ತಿಯನ್ನು ವಿಸ್ತರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತದನಂತರದ ವರ್ಷದಲ್ಲಿ ತುರ್ತುಪರಿಸ್ಥಿತಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮವಂತೂ ಐತಿಹಾಸಿಕ ಎನ್ನುವಷ್ಟರ ಮಟ್ಟಿಗೆ ಯಶಸ್ವಿಯಾಯಿತು. ಡಿ.ಎಚ್ ಶಂಕರಮೂರ್ತಿ, .ಸು.ರಾಮಣ್ಣನಂತಹ ಹಿರಿಯರು ಭಾಗವಹಿಸಿ, ಕಿರಿಯರಿಗೂ ಪ್ರೇರಣೆ ನೀಡಿದರು. ಅಂದಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ನೂರಾರು ಮಂದಿ ಇಂದಿನ ಪೀಳಿಗೆಯೊಂದಿಗೆ ಬೆರೆತು ಆನಂದಿಸಿದುದು ಅವಿಸ್ಮರಣೀಯ ಕ್ಷಣವಾಗಿತ್ತು.
ಸಾಮರಸ್ಯ ಸಮಾಜ ನಿರ್ಮಾಣ ಕೇವಲ ಮಾತಿನಿಂದ ಸಾಧ್ಯವಿಲ್ಲ, ಅದಕ್ಕೆ ಪ್ರತ್ಯಕ್ಷ ಮೇಲ್ಪಂಕ್ತಿ ಹಾಗೂ ಸಾಮೂಹಿಕ ಸಹಜೀವನದ ಅನುಭವವಿರಬೇಕು. ಈ ನಿಟ್ಟಿನಲ್ಲಿ ಆಯೋಜಿಸಿದ ಅಂಬೇಡ್ಕರ್ – ಸಾಮರಸ್ಯ ಮತ್ತು ರಾಷ್ಟ್ರೀಯತೆ ಎಂಬ ವಿಷಯದ ಮೇಲೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಾಗವಹಿಸಿದ್ದು ಇಲ್ಲಿನ ವ್ಯವಸ್ಥೆ ಹಾಗೂ ಪ್ರತ್ಯಕ್ಷ ಸಾಮರಸ್ಯದ ಆಚರಣೆಯನ್ನು ಕಂಡು ಭಾವುಕರಾಗಿದ್ದರು.
ಸ್ವಾತಂತ್ರೋತ್ತರ ಭಾರತದ ಶಾಲಾ ಪಾಠ್ಯಮಸ್ತಕಗಳಲ್ಲಿ ಕಾಣಸಿಗದ, ಇತಿಹಾಸಕಾರರು ಅನೇಕರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ, ಬಚ್ಚಿಟ್ಟ ಹತ್ತುಹಲವು ಸಂಗತಿಗಳನ್ನು ಭಾರತೀಯ ಶೌರ್ಯ ಪರಂಪರೆಯ ವಿಚಾರಸಂಕಿರಣದ ಮೂಲಕ ಭಾರತದ ನೈಜ ಇತಿಹಾಸವನ್ನೂ ಇಲ್ಲಿಯ ಅಪ್ರತಿಮ ಕ್ಷಾತ್ರತೇಜವನ್ನೂ ತೋರ್ಪಡಿಸುತ್ತಲೇ ಆಧುನಿಕ ಇತಿಹಾಸಕಾರರ ದುರುದ್ದೇಶವನ್ನು ಬಯಲಿಗೆಳೆಯುವ ಕಾರ್ಯಕ್ರಮ ಎಂಟನೇ ವರ್ಷದ ವಿಚಾರಸಂಕಿರಣದ ವಿಶೇಷತೆಯಾಗಿತ್ತು.
ಹತ್ತನೇ ವರ್ಷದಲ್ಲಿ ಭಾರತದ ಸಂಸ್ಕೃತಿಯು ಜಗತ್ತಿನಾದ್ಯಂತ ಹರಡಿದ ಬಗೆ, ಜಗತ್ತು ಇದನ್ನು ಸ್ವೀಕರಿಸಿದ ರೀತಿ ಹಾಗೂ ಜಗತ್ತಿಗೆ ಭಾರತದ ಮೇಲಿದ್ದ ಗೌರವದ ಸಂಗತಿಗಳಿಗೆ ಈ ವಿಚಾರಸಂಕಿರಣ ವೇದಿಕೆಯಾಯಿತು. ಖ್ಯಾತ ಚಿಂತಕರು, ವಿದ್ವಾಂಸರು ಶತಾವಧಾನಿ ಆರ್. ಗಣೇಶ್, ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ| ಶರದ್ ಹೆಬ್ಬಾಳ, ಪ್ರಜ್ಞಾಪ್ರವಾಹ ಇದರ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಘುನಂದನ್ ಭಾಗವಹಿಸಿ ವಿಚಾರ ಮಂಡಿಸಿದ್ದರು.
ಈ ಬಾರಿಯ ವಿಚಾರಸಂಕಿರಣದಲ್ಲಿ
ಕಳೆದ ಆರೇಳು ವರ್ಷಗಳಲ್ಲಿ ಭಾರತವನ್ನು ಸದೃಢಗೊಳಿಸಲು ನಡೆಯುತ್ತಿರುವ ಪ್ರಯತ್ನಗಳು, ಅದರ ಪರಿಣಾಮ ಎಂಬ ವಿಷಯವನ್ನಿಟ್ಟುಕೊಂಡು ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ಪರಿಕಲ್ಪನೆಯಡಿಯಲ್ಲಿ ಭಾರತದ ರಾಜಕೀಯ, ಕಾನೂನು, ಆರ್ಥಿಕ, ವ್ಯಾವಹಾರಿಕ, ಬೌದ್ಧಿಕ ಮಜಲುಗಳಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯಲಿವೆ.
ಯಾರು ಭಾಗವಹಿಸಲಿದ್ದಾರೆ…?
ಈ ವಿಚಾರ ಸಂಕಿರಣದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ವಿಚಾರ ಸಂಕಿರಣದ ಅಗತ್ಯತೆ-ಅನಿವಾರ್ಯತೆ ಬಗ್ಗೆ ಪ್ರಸ್ತಾವನೆಗೈಯಲಿದ್ದಾರೆ. ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ್ ಸ್ವತ್ವಯುತ ಭಾರತ ಎಂಬ ವಿಷಯವನ್ನು ಮಂಡಿಸಲಿದ್ದಾರೆ. 2ನೇ ಅವಧಿಯಲ್ಲಿ ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯರು ಪ್ರೊ.ಬಿ.ಎಂ. ಕುಮಾರಸ್ವಾಮಿ ಇವರು ಭಾರತೀಯ ಅಭಿವೃದ್ಧಿ ಮಾದರಿಗಳು ಎಂಬ ವಿಷಯವನ್ನು ಮಂಡಿಸಲಿದ್ದಾರೆ. 3ನೇ ಅವಧಿಯಲ್ಲಿ ಕ್ಯಾ ಬ್ರಿಜೇಶ್ ಚೌಟ ನಿವೃತ್ತ ಸೇನಾಧಿಕಾರಿಗಳು ಸಾಮಾಜಿಕ ಕಾರಕರ್ತರು, ಮಂಗಳೂರು ಇವರು ಆಡಳಿತ ಮತ್ತು ನಿರ್ವಹಣೆ ಭಾರತೀಯ ಮಾದರಿ ಎಂಬ ವಿಷಯವನ್ನು ಮಂಡಿಸಿದರೆ, ಸಮಾರೋಪ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಚಿಂತಕರು, ಲೇಖಕರು ಹಾಗೂ ಪ್ರಖರ ವಾಗ್ಮಿ ಬೆಂಗಳೂರು ಇವರು ಸ್ವಾಮಿ ವಿವೇಕಾನಂದರ ಚಿಂತನೆಯ ಪ್ರಸ್ತುತತೆ ಎಂಬ ವಿಷಯನ್ನು ಮಂಡಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಗಳ 60ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳಿರುತ್ತವೆ.
ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು 750ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ, www.srvk.org ಎಂಬ ವಿದ್ಯಾಕೇಂದ್ರದ ವೆಬ್‌ಸೈಟ್‌ನಲ್ಲಿ ಆಮಂತ್ರಣ ಹಾಗೂ ಸಂಪರ್ಕಿಸಬೇಕಾದವರ ವಿವರಗಳು ಲಭ್ಯವಿದೆ ಎಂದು ಅವರು ತಿಳಿಸಿದರು.

