ಬಂಟ್ವಾಳ: ಸಂಸ್ಕಾರದ ಮೂಲಕ ಸಂಸ್ಕೃತಿಯಲ್ಲಿ ಒಂದಾಗಬೇಕು. ಕೃಷಿ- ಋಷಿ ಗಟ್ಟಿಯಾದರೆ ದೇಶ ಬಲಿಷ್ಠವಾಗುತ್ತದೆ. ಧರ್ಮ- ಸಂಸ್ಕೃತಿಗೆ ಕಲ್ಲಡ್ಕ ದೊಡ್ಡ ಕೊಡುಗೆ ನೀಡಿದೆ. ಜೀವನ ಶಿಕ್ಷಣದ ಅಗತ್ಯತೆ ಇದೆ. ಮಾನವೀಯತೆ ಮರೆಯುದ ಎಚ್ಚರಿಕೆಯ ಬದುಕು ನಮ್ಮದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಅವರು ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಪರಮಪೂಜ್ಯ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ-2021 ಬಂಟ್ವಾಳ ತಾಲೂಕು ಇದರ ಕಲ್ಲಡ್ಕ ವಲಯ ಸಮಿತಿ ಹಾಗೂ ಒಡಿಯೂರು ಶ್ರೀಗಳ ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ಇದರ ವತಿಯಿಂದ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಸಹಯೋಗದೊಂದಿಗೆ ನಡೆದ ಷಷ್ಠ್ಯಬ್ದ ಸಂಭ್ರಮ ಅಂಗವಾಗಿ ನಡೆದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಒಡಿಯೂರು ಶ್ರೀಗಳು ಮನುಕುಲದ ಜತೆಗೆ ಗೋಸಂಕುಲಕ್ಕೂ ವಿಶೇಷ ಕೊಡುಗೆಯನ್ನಿತ್ತಿದ್ದಾರೆ. ಈಗಿನ ಸಾಧನೆಗಿಂತ ಮಿಗಿಲಾದ ಸಾಧನೆ ಮಾಡುವ ಶಕ್ತಿಯನ್ನು ದೇವರು ನೀಡಬೇಕು ಎಂಬುದನ್ನು ನಾವು ಪ್ರಾರ್ಥಿಸಬೇಕು ಎಂದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಒಡಿಯೂರು ಶ್ರೀ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ , ದಿನೇಶ್ ಅಮ್ಟೂರು ವೇದಿಕೆಯಲ್ಲಿದ್ದರು.
ಇನ್ನೊಮೆಕ್ ಟೆಕ್ನಾಲಜೀಸ್ ನ ಬಾಲಸುಬ್ರಹ್ಮಣ್ಯ ಎಚ್.ಎಸ್.ಅವರು ಔಷಧಿ ಸಿಂಪಡಣೆ ಕುರಿತು ಮಾಹಿತಿ- ಪ್ರಾತ್ಯಕ್ಷಿಕೆ ನೀಡಿದರು. ವಿವಿಧ ಸಂಘಗಳಿಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಉದ್ಯೋಗ ನೈಪುಣ್ಯತೆ ಶಿಬಿರದ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ವಲಯ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ ಸ್ವಾಗತಿಸಿದರು. ಗೋಳ್ತಮಜಲು ಗ್ರಾ.ಪಂ.ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

