ಕಲ್ಲಡ್ಕ: ಸಂಶೋಧನೆ ಅನ್ನುವಂಥದ್ದು ಒಂದು ಕ್ಲಿಷ್ಟಕರವಾದ ವಿಷಯ. ಇದು ನಮ್ಮನ್ನು ತಾರ್ಕಿಕವಾಗಿರುವ ಅಂತಿಮ ಸತ್ಯದೆಡೆಗೆ ಕೊಂಡುಹೋಗುತ್ತದೆ. ಯಾಕೆಂದರೆ ಕೆಲವು ಸಲ ನಾವು ನೋಡುವ ದೃಷ್ಟಿಕೋನದಲ್ಲಿ ವ್ಯತ್ಯಾಸಗಳು ಇರುತ್ತದೆ. ಸತ್ಯವನ್ನು ಹುಡುಕುವ ಪ್ರಯತ್ನವೇ ಸಂಶೋಧನೆ. ನಿರಂತರವಾಗಿ ನಡೆಯುವ ಇಂತಹ ಪ್ರಯತ್ನದಿಂದ ವಿಚಾರಗಳನ್ನು ಮನನ ಮಾಡಲು ಮತ್ತು ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಲು ಉತ್ತಮವಾದ ಅವಕಾಶ ದೊರಕುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಇಡಿ ಕಾಲೇಜು ಉಜಿರೆ ಇದರ ಪ್ರಾಂಶುಪಾಲ ಡಾ| ಕೆ. ನಿತ್ಯಾನಂದ ನುಡಿದರು.
ಅವರು ಶ್ರೀರಾಮ ಪದವಿ ಕಾಲೇಜಿನಲ್ಲಿ IQAC ಸಹಯೋಗದೊಂದಿಗೆ ವಾಣಿಜ್ಯ ಹಾಗೂ ಕಲಾ ವಿಭಾಗ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಗಳ ಪ್ರಸ್ತುತೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಗುಣಮಟ್ಟ ಕೆಳಮಟ್ಟಕ್ಕೆ ತಲುಪಿದ್ದು, ಅದರದ್ದೇ ಆದ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಎಳವೆಯಲ್ಲಿ ಸಂಶೋಧನಾ ಮನಸ್ಸು ಸೃಷ್ಟಿ ಮಾಡಬೇಕು. ಆ ನಿಟ್ಟಿನಲ್ಲಿ ಪದವಿ ಹಂತದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿವೇಕಾನಂದ ಕಾಲೇಜು ಪತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ| ವಿಜಯ ಸರಸ್ವತಿ, ಪ್ರಸನ್ನ ಕಾಲೇಜು ಬೆಳ್ತಂಗಡಿ ಇಲ್ಲಿನ ಅರ್ಥಶಾಸ್ತ್ರ ಉಪನ್ಯಾಸಕ ದಿನೇಶ್, ಎಸ್. ಡಿ. ಎಂ. ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಚಿದಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಾಣಿಜ್ಯ ಉಪನ್ಯಾಸಕಿ ಸುಶ್ಮಿತಾ ಮಿತ್ತೂರು ನಿರೂಪಿಸಿ, ಸ್ವರ್ಣಗೌರಿ ಸ್ವಾಗತಿಸಿ, ಸುಶ್ಮಿತಾ ಸಜಿಪ ವಂದಿಸಿದರು.
ವಾಣಿಜ್ಯ ವಿಭಾಗದ 12 ವಿದ್ಯಾರ್ಥಿಗಳ 8 ತಂಡ ಹಾಗೂ ಕಲಾ ವಿಭಾಗದ 32 ವಿದ್ಯಾರ್ಥಿಗಳು ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಉತ್ತಮ ಪ್ರಸ್ತುತಿಗೈದ ತಂಡವನ್ನು ಅಭಿನಂದಿಸಲಾಯಿತು.