ಕಲ್ಲಡ್ಕ: ಭಾರತದ ಸಂಸ್ಕೃತಿ ಜಗತ್ತಿನಲ್ಲಿ ಸರಸಾಟಿ ಇಲ್ಲದ್ದು. ಏಕೆಂದರೆ ಇಲ್ಲಿನ ಜ್ಞಾನ, ಪರಂಪರೆ ಎಲ್ಲವೂ ವಿಶ್ವಮಾನ್ಯವಾಗಲು ಕಾರಣ. ನಮ್ಮ ಉದಾರತೆ ನಮ್ಮ ಭೌಗೋಳಿಕ ವ್ಯವಸ್ಥೆಯು ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸಿದೆ ಎಂದರೆ ತಪ್ಪಲ್ಲ. ಸೂರ್ಯ ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಭೂಮಧ್ಯೆ ರೇಖೆಯ ಭಾಗದಲ್ಲಿ ಇರುವಂತ ನಾವು ಸೂರ್ಯನ ನೇರ ಪ್ರಭಾವಕ್ಕೆ ಒಳಗಾಗಿರುವುದರಿಂದ ನಮ್ಮ ಚಿಂತನೆ, ಯೋಚನೆಗಳೆಲ್ಲವೂ ಉದಾತ್ತ ಮಟ್ಟಕ್ಕೆ ಏರಿದವು. ಏಕೆಂದರೆ ಸೂರ್ಯ ಜ್ಞಾನದ ಮೂಲ. ನಮ್ಮ ಸಂಸ್ಕೃತಿಯ ಯಾವುದೇ ಭಾಗವಿರಲಿ ಅದು ಅರಳಿಸಿ, ವ್ಯಕ್ತಿತ್ವವನ್ನು ವಿಕಸನಗೊಳಿಸಿ ನಮ್ಮನ್ನು ಎತ್ತರಕ್ಕೆ ಏರಿಸುವಂತದ್ದು. ಬಹು ಸಂಸ್ಕೃತಿಯ ನಾಡಾದರೂ ಇಡೀ ದೇಶವೇ ಒಂದು ಎಂಬ ಭಾವ ನಮ್ಮನ್ನು ಆವರಿಸಿದೆ. ಇಲ್ಲಿನ ಆಹಾರ, ಉಡುಗೆ-ತೊಡುಗೆ, ಪದ್ಧತಿಗಳು ಎಲ್ಲವೂ ವಿಭಿನ್ನವಾಗಿ ತೋರಿಬಂದರೂ ನಮ್ಮದು ಒಂದೇ ಸಂಸ್ಕೃತಿಯನ್ನು ಹೊಂದಿದ ಮಹಾನ್ ರಾಷ್ಟ್ರ. ಯಾವ ಆಚರಣೆಗೂ ಇಲ್ಲಿ ವಿರೋಧವಿಲ್ಲ ಆದ್ದರಿಂದ ಭಾರತದವರು, ಹಿಂದುಗಳು ಅಸಹಿಷ್ಣಗಳಾಗಲು ಸಾಧ್ಯವೇ ಇಲ್ಲ. ಪ್ರಶ್ನಿಸುವುದು ನಮ್ಮ ಗುಣ. ಪ್ರಶ್ನಿಸಿದಾಗ ಉತ್ತರ ತಿಳಿದಿದ್ದರೆ ಹೇಳುವುದು, ಇಲ್ಲವಾದಲ್ಲಿ ತಿಳಿದು ಹೇಳುವನೆಂಬ ಸೌಜನ್ಯ ಅದಕ್ಕಿಂತಲೂ ಶ್ರೇಷ್ಠವಾದದ್ದು. ತಿಳಿದಿಲ್ಲವೆಂದರೆ ಅದು ಅಗೌರವವಲ್ಲ ಬದಲಾಗಿ ನಾನು ಕಲಿಯಬೇಕಾದದ್ದು ಸಾಕಷ್ಟಿದೆ ಎಂಬುದು ಪ್ರೌಢಿಮೆಯ ಭಾವನೆ ಎಂದು ಖ್ಯಾತ ವಿದ್ವಾಂಸ ಶತಾವಧಾನಿ ಡಾ| ಆರ್ ಗಣೇಶ್ ನುಡಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಕಾಲೇಜಿನ ವಿಚಾರಸಂಕಿರಣದ ಉದ್ಘಾಟನಾ ಭಾಷಣ ಮಾಡುತ್ತಾ ಹೀಗೆಂದರು. ನಮ್ಮ ಜ್ಞಾನದ ಪರಂಪರೆ ತುಂಬಾ ನಶಿಸಿ ಹೋಗಿದೆ ಎಂಬ ಭಾವನೆ ನಮ್ಮಲ್ಲಿದ್ದರೂ ಇಂದಿಗೂ ಅದು 80%ಕ್ಕಿಂತಲೂ ಹೆಚ್ಚು ಉಳಿದುಕೊಂಡಿದೆ ಎಂಬುದು ಹೆಮ್ಮೆಯ ವಿಚಾರ. ಪಾಕಿಸ್ತಾನ, ಅಫಘಾನಿಸ್ತಾನಗಳಂತಹ ದೇಶದಲ್ಲಿದ್ದ ನಮ್ಮ ಪ್ರಾಚೀನ ವಿಶ್ವವಿದ್ಯಾನಿಲಯಗಳು ನಿರಂತರ ದಾಳಿಯಿಂದ ಜರ್ಜರಿತಗೊಂಡಿದೆಯಾದರೂ ಇಂದಿಗೂ ಜ್ಞಾನ ಪರಂಪರೆಯ ವಾರಸುದಾರರು ನಾವು ಎಂಬ ಹೆಮ್ಮೆ ನಮಗಿರಲಿ ಎಂದು ಕಿವಿಮಾತು ಹೇಳಿದರು.


ಪ್ರಸ್ತಾವನೆ ರೂಪದಲ್ಲಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನಮ್ಮ ಸಂಸ್ಕೃತಿಯ ವಿಶ್ವವ್ಯಾಪಕತೆಯ ಬಗೆಗೆ ನಮಗೆ ಅರಿವಿಲ್ಲದಿರುವುದು ದುರಂತ. ಉದ್ಧೇಶಪೂರ್ವಕವಾಗಿ ಪಠ್ಯಪುಸ್ತಕಗಳಿಂದ ಇದನ್ನು ಕೈಬಿಡಲಾಗಿದೆ. ಇಂತಹ ದುರುದ್ಧೇಶಪೂರಿತ ವ್ಯಕ್ತಿಗಳೇ ಶಿಕ್ಷಣ ಇಲಾಖೆಯನ್ನು ನಿರ್ವಹಿಸಿತ್ತಿರುವುದು ಖೇದಕರ. ಆದರೆ ಯಾವುದೋ ಒಂದು ಹಂತದಲ್ಲಿ ನೈಜತೆ ಅರಿವಿಗೆ ಬರಲೇಬೇಕಲ್ಲವೇ ಅದಕ್ಕಾಗಿ ಈ ವಿಚಾರ ಸಂಕಿರಣ ಎಂದರು.
ವಿದ್ಯಾಕೇಂದ್ರದ ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಿದ ಹಿರಿಯರು ಮುಕ್ತ ಕಂಠದಿಂದ ಶ್ಲಾಘಿಸಿದರು. ದಿನಪೂರ್ತಿ ನಡೆದ ವಿಚಾರ ಸಂಕಿರಣದ 2ನೇಯ ಅವಧಿಯಲ್ಲಿ ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ| ಶರದ್ ಹೆಬ್ಬಾಳ್ಕರ್ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರ ಎಂಬ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಪ್ರಜ್ಞಾಪ್ರವಾಹ ಇದರ ಸಂಯೋಜಕ ಶ್ರೀ ರಘನಂದನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಪದವಿ ಪ್ರಾಚಾರ್ಯ ಉಪಸ್ಥಿತರಿದ್ದರು.
ಈ ವಿಚಾರ ಸಂಕಿರಣದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರದ ವಿವಿಧ ಆಯಾಮಗಳನ್ನು ಬಿಂಬಿಸುವ ನೂರಾರು ಪ್ರದಶರ್ಿನಿಗಳು, ಹತ್ತಾರು ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು. ಮಂಗಳೂರು ವಿಶ್ವವಿದ್ಯಾನಿಲಯದ 35 ಕಾಲೇಜುಗಳಿಂದ 152 ವಿದ್ಯಾರ್ಥಿಗಳು, 46 ಉಪನ್ಯಾಸಕರು, ಅಲ್ಲದೇ ತುಮಕೂರು, ಬೆಂಗಳೂರು, ರಾಣಿಚೆನ್ನಮ್ಮ, ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಕರ್ನಾಟಕ ವಿಶ್ವವಿದ್ಯಾನಿಲಯ ಈ ರೀತಿ ಇತರೇ 13 ವಿಶ್ವವಿದ್ಯಾನಿಲಯಗಳ 53 ವಿದ್ಯಾರ್ಥಿಗಳು, 14 ಉಪನ್ಯಾಸಕರು ಅಲ್ಲದೇ 39 ಪ್ರತಿನಿಧಿಗಳು ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ 135 ಉಪನ್ಯಾಸಕರು, 360 ವಿದ್ಯಾರ್ಥಿಗಳನ್ನೊಳಗೊಂಡು ಒಟ್ಟು 847 ಮಂದಿ ಭಾಗವಹಿಸಿದ್ದಾರೆ.
ಅತಿಥಿಗಳನ್ನು ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ಸಂಸ್ಥೆಯ ಸಂಚಾಲಕ ವಸಂತ ಮಾದವ ವಂದಿಸಿ, ಪದವಿ ವಿಭಾಗದ ಕನ್ನಡ ಉಪನ್ಯಾಸಕ ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.