Sunday, February 9, 2025

ಅತ್ಯಾಕರ್ಷಕ ಶೈಲಿಯಲ್ಲಿ ನಿರ್ಮಾಣವಾಗುತ್ತಿದೆ ಕಕ್ಕೆಪದವು ಗರಡಿ

ಬಂಟ್ವಾಳ: ತುಳುನಾಡಿನಲ್ಲೇ ತೀರಾ ಅಪೂರ್ವವೆಂಬಂತೆ ವಿಶಿಷ್ಠ ವಿನ್ಯಾಸದ ಆತ್ಯಾಕರ್ಷಕ ಶೈಲಿಯ ಗರಡಿಯೊಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ.
ಬಂಟ್ವಾಳ- ಧರ್ಮಸ್ಥಳ ರಸ್ತೆಯ ವಗ್ಗ ಕಾರಿಂಜ ಕ್ರಾಸ್ ಎಂಬಲ್ಲಿಂದ ಕೊಡ್ಯಮಲೆ ದಟ್ಟಾರಣ್ಯದಿಂದ ಕೂಡಿರುವ ವನಸಿರಿಯ ನಡುವಿನ ರಸ್ತೆಯಲ್ಲಿ 7ಕಿ.ಮಿ.ಸಾಗಿದರೆ ಉಳಿ ಗ್ರಾಮದಲ್ಲಿರುವ ಕಕ್ಯಪದವು ಎಂಬ ಗ್ರಾಮೀಣ ಪ್ರದೇಶದ ಚಿಕ್ಕಪೇಟೆ. ಈ ಪೇಟೆಯ ಹೃದಯ ಭಾಗದಲ್ಲೇ ಭಕ್ತ ಭಾವುಕರನ್ನು ತನ್ನಡೆಗೆ ಕೈಬೀಸಿ ಕರೆಯುತ್ತಿದೆ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ. ಇದೀಗ ಈ ಕ್ಷೇತ್ರಕ್ಕೆ ಪುನರ್ನಿಮಾಣದ ಪರ್ವಕಾಲ, ಕೋಟಿ ಚೆನ್ನಯರ ಗತಕಾಲದ ಬದುಕು, ಸಾಧನೆಯನ್ನು ಭಕ್ತಕೋಟಿ ಪುನರಪಿ ನೆನೆಯುವ ಪುಣ್ಯಕಾಲ.
ಐತಿಹಾಸಿಕವಾಗಿ ಅತೀ ಪುರಾತನ ಹಿನ್ನೆಲೆ ಇರುವ, ಅನಾದಿಕಾಲದಿಂದಲೂ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವೆಂದು ಜನಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಕಕ್ಯಪದವು ಗರಡಿ ಕ್ಷೇತ್ರದ ಪುನರ್ನಿಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅಂದಾಜು 3 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಶ್ರೀ ಕ್ಷೇತ್ರ ಸರ್ವಾಂಗ ಸುಂದರವಾಗಿ ಕಂಗೊಳಿಸುವರೇ ವ್ಯಾಪಕ ಸಿದ್ಧತೆ ನಡೆಯುತ್ತಿದೆ.
ಐತಿಹಾಸಿಕ ಹಿನ್ನೆಲೆ: 
ಕಕ್ಯಪದವು ಗರಡಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಇದೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆಯನ್ನು ಮೆರೆದು ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಿ ದೈವತ್ವವನ್ನು ಏರಿದ ಅವಳಿ ವೀರಪುರುಷರಾದ ಕೋಟಿ ಚೆನ್ನಯರು ಬಾಳಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಅವರಿಂದಲೇ ಸ್ಥಾಪಿಸಲ್ಪಟ್ಟಿತು ಎನ್ನಲಾದ ತುಳುನಾಡಿನ 66 ಮೂಲಗರಡಿಗಳಲ್ಲಿ ಕಕ್ಯಪದವು ಗರಡಿಯೂ ಒಂದು ಎನ್ನುವುದು ಇಲ್ಲಿನ ವಿಶೇಷತೆ. ಕ್ರೀಡೆಯನ್ನು ಅತೀಯಾಗಿ ಪ್ರೀತಿಸುತ್ತಿದ್ದ ಕೋಟಿ ಚೆನ್ನಯರು ಇಲ್ಲಿ ವಿಶಾಲ ಕ್ರೀಡಾಂಗಣದಂತಿರುವ ಬಯಲು ಭೂಮಿಯಲ್ಲಿರುವ ಗರಡಿಯಲ್ಲಿ ನೆಲೆಯಾಗಿರುವುದೂ ಗಮನಾರ್ಹ ಅಂಶ. ಕ್ರೀಡಾಮೈದಾನದ ಸ್ವರೂಪದಲ್ಲಿರುವ ಏಕೈಕ ಗರಡಿ ಕ್ಷೇತ್ರ ಎನ್ನುವುದು ಇಲ್ಲಿನ ಹೆಗ್ಗಳಿಕೆ.
ಕಕ್ಕೆಪದವು ಗರಡಿ : 
ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಪ್ರದೇಶದಲ್ಲಿರುವ ಪಡುಮಲೆ, ಪಂಜ, ಎಣ್ಮೂರು ಕೋಟಿ ಚೆನ್ನಯರು ಹುಟ್ಟಿ ಬೆಳೆದು ಸಾಧನೆಗೈದ ಊರುಗಳು.  ಕೋಟಿ ಚೆನ್ನಯರು ಜೀವಂತವಾಗಿರುವಾಗಲೇ ಸ್ಥಾಪಿಸಲ್ಪಟ್ಟ ಅರ್ವತ್ತಾರು ಗರಡಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ” ಕಕ್ಯಪದವು ಗರಡಿ” ಎಂದರೆ ಸುತ್ತಮುತ್ತಲಿನ ಊರಿನ ಜನತೆಗೆ ಭಕ್ತಿಭಾವೈಕ್ಯತೆಯ, ಕಾರಣೀಕದ ಪವಿತ್ರ ತಾಣ. ಇಲ್ಲಿನ ಉತ್ಸವಗಳೆಂದರೆ ಊರಿಗೆ ಊರೇ ಹಬ್ಬದ ವಾತಾವರಣ. ಅಪಾರ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಅಗಮಿಸಿ ಶಕ್ತಿಗಳನ್ನು ಪ್ರಾರ್ಥಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡ ಪದ್ಧತಿ.
ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತಾದಿಗಳ ಆರಾಧನಾಲಯವಾಗಿ ಕಕ್ಯಪದವು ಗರಡಿ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ.
ಬಾರ್ದಡ್ಡು ಗುತ್ತಿನವರು ಹಿಂದೊಮ್ಮೆ ಇಲ್ಲಿ ಗರಡಿಯನ್ನು ಸ್ಥಾಪಿಸಿ ಪೂಜೆ ಉತ್ಸವಾದಿಗಳನ್ನು ನಡೆಸಿಕೊಂಡು ಬರುತ್ತಿದ್ದರು. ನಂತರ ಎ.ಡೀಕಯ ಪೂಜಾರಿ ಕಕ್ಯಪದವು ಮತ್ತು ಲಿಂಗಪ್ಪ ಮಾಸ್ತರ್ ಪಾದೆಯವರ ಮುಂದಾಳತ್ವದಲ್ಲಿ ಮತ್ತೆ ಗರಡಿ ಪುನರುತ್ಹಾನಗೊಂಡು ಮೈದಳೆದು ನಿಂತಿತು.ನಂತರ ಸಂಜೀವ ಪೂಜಾರಿ ಕೇರ್ಯ, ಡಾ.ದಿನೇಶ್ ಬಂಗೇರ ಕಕ್ಯಪದವು ಗರಡಿ ಸಮಿತಿಯ ಅಧ್ಯಕ್ಷರಾಗಿ ಮುನ್ನಡೆಸಿದ್ದು ಪ್ರಸ್ತುತ ಧಾರ್ಮಿಕ, ಸಾಮಾಜಿಕ ನೇತಾರರಾದ ಕೆ.ಮಾಯಿಲಪ್ಪ ಸಾಲ್ಯಾನ್ ಮುಂದಾಳತ್ವದಲ್ಲಿ ಗರಡಿಯು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ.
ಪುನರ್ ನಿರ್ಮಾಣ ಸಂಕಲ್ಪ:
ಕ್ಷೇತ್ರದಲ್ಲಿ ಅಸ್ರಣ್ಣರಾದ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ ನೆಲ್ಯಾಡಿ ಶ್ರೀಧರ ಗೋರೆಯವರಿಂದ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರವನ್ನು ಪುನರ್ ನಿರ್ಮಿಸಲು ಊರಪರವೂರ ಭಕ್ತಜನತೆ ಸೇರಿ ಸಂಕಲ್ಪಿಸಿ ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗರಡಿ ಕ್ಷೇತ್ರವನ್ನು ನಿರ್ಮಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ವಿಶಿಷ್ಠ ವಿನ್ಯಾಸದ ಅತ್ಯಂತ ಅಪರೂಪದ ಕಲಾತ್ಮಕ ಶೈಲಿಯ ಬ್ರಹ್ಮಬೈದರ್ಕಳ ಗರಡಿ, ಶ್ರೀ ಕಡಂಬಿಲ್ತಾಯಿ ಮತ್ತು ಶ್ರೀ ಕೊಡಮಣಿತ್ತಾಯಿ ದೈವಸ್ಥಾನ, ದೈವೊಂಕುಲು ಮಾಡ, ಧ್ವಜಸ್ಥಂಭ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು ಶೇಖಡಾ 80 ಕಾಮಗಾರಿ ಮುಕ್ತಾಯಗೊಂಡಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾದಂತೆ ಮೇ.ತಿಂಗಳಲ್ಲಿ ಪ್ರತಿಷ್ಠೆ, ಬ್ರಹ್ಮಕಲಾಶಾಧಿಗಳನ್ನು ಅರ್ಥಪೂರ್ಣವಾಗಿ, ವೈಭವಪೂರ್ಣವಾಗಿ ನಡೆಸಲು ಸಮಿತಿಯು ತೀರ್ಮಾನಿಸಿದೆ.
ಮುಂದಿನ ಹಂತದಲ್ಲಿ ಸುತ್ತು ಪೌಳಿ, ಆವರಣಗೋಡೆ, ವ್ಯಾಯಾಮ ಶಾಲೆ, ದೈಯಿಬೈದೆತಿ ಮನೆ, ಮೂಲಿಕಾ ವನ ಮೊದಲಾದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಯೋಚನೆಯು ಸಮಿತಿಯ ಮುಂದಿದ್ದು ಮುಂದೊಂದು ದಿನ ಕಕ್ಯಪದವು ಗರಡಿ ತುಳುನಾಡಿಗೆ ಮಾದರಿಯಾಗಿ ಗತವೈಭವವನ್ನು ಸಾರುವ ಸಾಧ್ಯತೆ ದಿಟವಾಗಿದೆ.
ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಗರಡಿಯು ಸಮಗ್ರವಾಗಿ ಅಭಿವೃದ್ಧಿಗೊಂಡು ಸರ್ವಾಂಗ ಸುಂದರವಾಗಿ ಕಂಗೊಳಿಸುವರೇ ಊರಪರವೂರ ಭಕ್ತಾದಿಗಳ ತನುಮನಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ.
ಪ್ರಸ್ತುತ ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷರು, ಜಿಲ್ಲಾ ಪಂಚಾಯತು ಸದಸ್ಯ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು ಅಧ್ಯಕ್ಷರು, ರೋಹಿನಾಥ ಪಾದೆ ಕಾರ್ಯಾಧ್ಯಕ್ಷರು, ರತ್ನಕುಮಾರ್ ಅರಿಗ ಮತ್ತು ರಾಜವೀರ ಜೈನ್ ಗೌರವ ಸಲಹೆಗಾರರಾಗಿರುವ ಪುನರ್ ನಿರ್ಮಾಣ ಸಮಿತಿ, ಕೆ.ಮಾಯಿಲಪ್ಪ ಸಾಲ್ಯಾನ್ ಅಧ್ಯಕ್ಷರು, ಡೀಕಯ ಕುಲಾಲ್ ಪ್ರಧಾನ ಕಾರ್ಯದರ್ಶಿ, ಚಂದ್ರಶೇಖರ ಕೆ.ಕೋಶಾಧಿಕಾರಿಯಾಗಿರುವ ಜೀರ್ಣೋದ್ಧಾರ ಸಮಿತಿ, ವಿಶ್ವನಾಥ ಸಾಲ್ಯಾನ್ ಬಿತ್ತ ಅಧ್ಯಕ್ಷರಾಗಿರುವ ಉತ್ಸವ ಸಮಿತಿ, ಸಮಿತಿಗಳ ಪದಾಧಿಕಾರಿಗಳು ಹಾಗೂ ಊರಪರವೂರ ಭಕ್ತವೃಂದ ಪುನರ್ ನಿರ್ಮಾಣದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.
ಕ್ಷೇತ್ರದ ಅಭಿವೃದ್ಧಿಗೆ ಧನಸಹಾಯ ನೀಡಲಿಚ್ಚಿಸುವ ದಾನಿಗಳು ವಿಜಯಬ್ಯಾಂಕ್ ಕಕ್ಯಪದವು ಶಾಖೆಯಲ್ಲಿನ ಉಳಿತಾಯ ಖಾತೆ ಸಂಖ್ಯೆ 153601011002016( ifsc code: VIJB 0001536)ಕ್ಕೆ ಪಾವತಿಸಬಹುದಾಗಿದೆ.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...