Wednesday, February 12, 2025

ಕೈಕಂಬ ಬಸ್ಸ್‌ಬೇಗೆ ಯಾವಾಗ ಬಸ್ಸು ಬರಬಹುದು….

ಯಾದವ ಕುಲಾಲ್
ಬಿ.ಸಿ.ರೋಡು : ರಸ್ತೆಗಳಲ್ಲಿ ಝೀಬ್ರಾ ಕ್ರಾಸಿಂಗ್  ಹಾಕುವುದು ಯಾಕೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ವಾಹನ ದಟ್ಟಣೆ ಇರುವಾಗ ಎಲ್ಲರೂ ಒಂದೇ ಕಡೆ ಸೇರಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ರಸ್ತೆ ದಾಟಲು ಅನುಕೂಲ ಕಲ್ಪಿಸುವುದಕ್ಕೋಸ್ಕರ ಈ ವ್ಯವಸ್ಥೆ ಇದೆ. ಆದರೆ ಇಲ್ಲೊಂದು ಕಡೆ ಇರುವ ಝೀಬ್ರಾ ಕ್ರಾಸಿಂಗ್ ಬಸ್ಸು ನಿಲುಗಡೆ ಸ್ಥಳವಾಗಿದೆ. ಜನರು ಬಸ್ಸಿಗೆ ಹತ್ತಲೂ ಕಷ್ಟ. ಜೊತೆಗೆ ರಸ್ತೆ ದಾಟಲೂ ಜನರು ಪರದಾಡುವಂತಹ ಪರಿಸ್ಥಿತಿ. ಬಿ.ಸಿ.ರೋಡಿನ ಕೈಕಂಬದ ಬಳಿ ಈ ದುರವಸ್ಥೆ ಎದ್ದು ಕಾಣುತ್ತಿದೆ.
ಹಲವು ವರ್ಷಗಳಿಂದ ಅದೇ ಬಸ್ಸು ನಿಲುಗಡೆ ಪ್ರದೇಶವಾಗಿತ್ತು. ಅದಲ್ಲದೆ ಹೊಟೇಲ್ ಬಾಗಿಲುಗಳಲ್ಲಿ, ಅಂಗಡಿಗಳ ಎದುರಿನಲ್ಲಿ ಮಳೆಗೆ ಒದ್ದೆಯಾಗುತ್ತಾ, ಬಿಸಿಲಿಗೆ ಒಣಗುತ್ತಾ ಜನರು ಬಸ್ಸಿಗಾಗಿ ಕಾಯುತ್ತಿದ್ದರು. ಸಾರ್ವಜನಿಕರ ಪರದಾಟವನ್ನು ಅರ್ಥೈಸಿಕೊಂಡು, ಅವರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿದ ಪುರಸಭೆ ಕೈಕಂಬದಲ್ಲಿ ಬಸ್ಸು ನಿಲ್ದಾಣವೊಂದನ್ನು ನಿರ್ಮಿಸಲು ಸಜ್ಜಾಗಿಯೇ ಬಿಟ್ಟಿತು. ಆದರೆ ಕೆಲವು ಅಂಗಡಿ ಮಾಲಿಕರ ತಕರಾರಿನಿಂದಾಗಿ ಪುರಸಭೆಯು ಒಮ್ಮೆ ನಿರ್ಧರಿತವಾದ ಸ್ಥಳವನ್ನು ಬದಲಾಯಿಸಿ ಕೈಕಂಬ ಪೇಟೆಯಿಂದ ಸ್ವಲ್ಪ ದೂರದಲ್ಲೇ ಬಸ್ಸು ನಿಲ್ದಾಣವನ್ನು ಪ್ರಾಯೋಜಕತ್ವದಲ್ಲಿ ನಿರ್ಮಾಣ ಮಾಡಿತು.
ಅನಾಥವಾದ ಬಸ್ಸು ಬೇ : ಪ್ರಾಯೋಜಕತ್ವದಲ್ಲಿ ನಿರ್ಮಾಣವಾದ ಬಸ್ಸುಬೇ ಈಗ ಅನಾಥವಾಗಿದೆ. ಸುತ್ತಲೂ ಗೂಡಂಗಡಿಗಳು ಸಾಲುಸಾಲಾಗಿ ಎದ್ದು ನಿಂತಿದೆ. ಆದರೆ ಬಸ್ಸು ಮಾತ್ರ ಅಲ್ಲಿ ನಿಲ್ಲಿಸಲು ಯಾರೂ ಮನಸ್ಸು ಮಾಡಲಿಲ್ಲ. ಹಿಂದಿನ ಕ್ರಮವನ್ನೇ ಮುಂದುವರಿಸಿಕೊಂಡು ರಸ್ತೆ ಬದಿಯೇ ಬಸ್ಸು ನಿಲುಗಡೆ ಪ್ರದೇಶವಾಗಿದೆ. ಜಾಹೀರಾತುದಾರರು ಹಣ ಕೊಟ್ಟು ಜಾಹೀರಾತು ಹಾಕಿದ್ದೇ ಬಂತು. ಬಸ್ಸು ಬೇಯ ಎರಡೂ ಬದಿಯಲ್ಲಿ ಹಾಕಲಾದ ಫ್ಲೆಕ್ಸ್ ಎಲ್ಲೋ ಮಾಯವಾಗಿದೆ. ಖಾಲಿ ಫ್ರೇಮ್ ಮಾತ್ರ ಉಳಿದಿದೆ.
ಬದಲಾವಣೆ ಅನಿವಾರ್ಯ : ಕೆಲವು ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಬರದೇ ಪ್ಲೈಓವರ್‌ನಲ್ಲಿ ನೇರವಾಗಿ ಮುಂದುವರಿದು ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ನಿಲುಗಡೆ ಮಾಡಲು ಹೊಸ ಯೋಜನೆ ಹಾಕಿದ್ದರು. ಆದರೆ ಅದರಿಂದ ಜನರಿಗೆ ತೊಂದರೆಯೇ ಜಾಸ್ತಿಯಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಬದಲಾವಣೆ ಅನಿವಾರ್ಯ. ಮೊದಮೊದಲು ಬದಲಾವಣೆ ಕೆಲವರಿಗೆ ಕಷ್ಟ ಆಗಬಹುದು ಆದರೆ ನಂತರ ಅದೇ ಎಲ್ಲರಿಗೂ ಸರಿಯಾಗುತ್ತದೆ ಎಂದು ಎಡಿಶನಲ್ ಎಸ್ಪಿ, ಎಎಎಸ್ಪಿ, ಇನ್ಸಪೆಕ್ಟರ್, ಟ್ರಾಫಿಕ್ ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದರೂ ಕೊನೆಗೆ ಸಾರ್ವಜನಿಕರ ಮಾತಿನಂತೆ ಮೊದಲಿನಂತೆ ಬಸ್ಸು ಸಂಚಾರ ಮಾಡಲಾಯಿತು. ಆದರೆ ಕೈಕಂಬದಲ್ಲಿ ಆ ಸಮಸ್ಯೆ ಇಲ್ಲ. ಬಸ್ಸುಬೇ ನಿರ್ಮಾಣ ಮಾಡಿದ ಸ್ಥಳದಲ್ಲಿ ಎಲ್ಲ ವ್ಯವಸ್ಥೆ ಇದೆ. ಬಸ್ಸು ನಿಂತು ಜನರನ್ನು ಹತ್ತಿಸಲು ವ್ಯವಸ್ಥೆ, ಬಸ್ಸಿನಿಂದ ಕೆಲವೇ ದೂರದಲ್ಲಿ ರಿಕ್ಷಾ ಪಾರ್ಕಿಂಗ್, ಇತರ ವಾಹನಗಳನ್ನು ನಿಲ್ಲಿಸಲು ಕಟ್ಟಡಗಳ ಎದುರುಗಡೆ ಪಾರ್ಕಿಂಗ್ ವ್ಯವಸ್ಥೆ ಹೀಗೆ ಎಲ್ಲ ಇದ್ದರೂ ಬಸ್ಸು ನಿಲ್ದಾಣದ ಬದಲಾವಣೆಗೆ ಯಾರೂ ಮುಂದಾಗಲಿಲ್ಲ.
ಸದಾ ಕಿಕ್ಕಿರಿದ ರಸ್ತೆ : ಈಗ ನಿಲ್ಲುವ ಬಸ್ಸು ನಿಲುಗಡೆ ಸ್ಥಳದಲ್ಲಿ ಒಂದು ಕಡೆ ಹತ್ತಿರದಲ್ಲೇ ರಸ್ತೆ ಬದಿಯಲ್ಲೇ ವಾಣಿಜ್ಯ ಸಂಕೀರ್ಣ ಒಂದೆಡೆಯಾದರೆ ಪೆರ್ಲಿಯಾ, ಅಲೆತ್ತೂರು, ಕೊಡಂಗೆಗೆ ಹೋಗುವ ದ್ವಿಚಕ್ರ, ತ್ರಿಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲೇ ಅತ್ತ ಕಡೆ ಹೋಗಬೇಕಾಗಿರುವುದು ಅನಿವಾರ್ಯ. ಆಸ್ಪತ್ರೆ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಸರಕಾರಿ ವಸತಿಗೃಹಗಳು ಹಾಗೂ ಮನೆಗಳು ಈ ಪ್ರದೇಶದಲ್ಲೇ ಇರುವುದರಿಂದ ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಹೀಗೆ ಬಸ್ಸು ನಿಲುಗಡೆಯಿಂದ ಕೊಡಂಗೆ ಕ್ರಾಸ್‌ತನಕ ಜನರು, ವಾಹನಗಳು, ಮಕ್ಕಳು ಸೇರಿ ರಸ್ತೆ ಸದಾ ಕಿಕ್ಕಿರಿದು ತುಂಬಿರುತ್ತದೆ. ಮತ್ತೊಂದು ಕಡೆಯಿಂದ ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳುವ ಬಸ್ಸುಗಳು ನಿಮಿಷಕ್ಕೊಂದರಂತೆ ಬಂದು ನಿಲ್ಲುತ್ತದೆ. ಈ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಎದೆ ಡವಡವ ಅನ್ನುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಪೊಲೀಸ್ ಇದ್ದರೂ ಅವರು ಅನುಭವಿಸುವ ತೊಂದರೆ ದೇವರಿಗೇ ಗೊತ್ತು.  ಬಸ್ಸು ನಿಲ್ಲುವುದು, ಝೀಬ್ರಾ ಕ್ರಾಸಿಂಗ್, ವಿರುದ್ಧ ದಿಕ್ಕಿನಲ್ಲಿ ತೆರಳುತ್ತಿರುವ ವಾಹನಗಳು, ವೇಗದೂತ ಬಸ್ಸುಗಳು ರಸ್ತೆಯಲ್ಲೇ ನಿಲ್ಲುವುದು.. ಹಿಗೆ ಎಲ್ಲವನ್ನೂ ಒಂದೇ ಕಡೆ ಹಾಕಿದರೆ ಅವರೇನು ತಾನು ಮಾಡಲು ಸಾಧ್ಯ. ಬಸ್ಸು ನಿಲುಗಡೆಯನ್ನು  ನಿರ್ಮಾಣ ಮಾಡಿದ ಬಸ್‌ಬೇ ಕಡೆ ವರ್ಗಾವಣೆ ಮಾಡಿ ಬದಲಾವಣೆಗೆ ಮುಂದಾದರೆ ಮಾತ್ರ  ಸಾರ್ವಜನಿಕರಿಗೆ ಉಪಯೋಗವಾಗಲು ಸಾಧ್ಯ. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ. ಜೊತೆಗೆ ಬಸ್ಸ್ ಬೇಗೂ ಜೀವ ಬರುತ್ತದೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...