ಬಂಟ್ವಾಳ: ಯಕ್ಷಮಿತ್ರರು ಕೈಕಂಬ ಬಿ. ಸಿ. ರೋಡು ಇದರ ಆಶ್ರಯದಲ್ಲಿ 15 ನೇ ವರ್ಷದ ಯಕ್ಷಗಾನ, ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯ ಹೊರಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.

ಈ ಸಂದರ್ಭ ಮೇಳದ ಹಿರಿಯ ಕಲಾವಿದ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಸನ್ಮಾನದಿಂದಾಗಿ ಯಕ್ಷಗಾನದಲ್ಲಿನ ತನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದರು.
ಚಂದ್ರಹಾಸ ರೈ ಬಾಲಾಜಿ ಬೈಲು ಅವರು ಸನ್ಮಾನಿಸಿ ಮಾತನಾಡಿ, ತನ್ನನ್ನು ತಾವೇ ಸನ್ಮಾನಿಸಿಕೊಳ್ಳುವ ಪ್ರವೃತಿ ಹೆಚ್ಚಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಸಂಘಟಕರೇ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ನಿಜವಾದ ಸನ್ಮಾನ ಈ ನಿಟ್ಟಿನಲ್ಲಿ ಕೈಕಂಬಯಕ್ಷಪ್ರಿಯರ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.
ಅತಿಥಿಯಾಗಿದ್ದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಅಜಕ್ಕಲ ಗಿರೀಶ್ ಭಟ್ ಮಾತನಾಡಿ,ಸಾಹಿತ್ಯ ,ವೇಷಭೂಷಣ, ಹಾಡುಗಾರಿಕೆ,ಬಣ್ಣಗಾರಿಕೆಯಂತಹ ಕಲೆಯ ವ್ಯಾಪ್ತಿಯೊಳಗೆ ಬರುವಂತಹ ಯಕ್ಷಗಾನಕ್ಕೆ ಕೊಡುಗೆ ನೀಡಿದವರನ್ನು ಗೌರವಿಸುವುದು ಶ್ಲಾಘನೀಯವಾಗಿದೆ ಎಂದರು.
ಯಕ್ಷಪ್ರಿಯರು ಸಂಸ್ಥೆಯ ಪ್ರಮುಖರಾದ ಶಂಕರಶೆಟ್ಟಿ ಪರಾರಿಗುತ್ತು,ಸದಾಶಿವ ಕೈಕಂಬ, ಸದಾನಂದ ಶೆಟ್ಟಿ ರಂಗೋಲಿ,ವಿಶ್ವನಾಥ,ಭುಜಂಗ ಸಾಲಿಯಾನ್ ರವರು ವೇದಿಕೆಯಲ್ಲಿದ್ದರು.
ಕಿಶೋರ್ ಭಂಡಾರಿ ಸ್ವಾಗತಿಸಿ,ನಿರೂಪಿಸಿದರು.ಮೇಳದ ಪ್ರಬಂಧಕ ಹರೀಶ್ ಬೊಳಂತಿಮೊಗರು ವಂದಿಸಿದರು.
ಹನುಮಗಿರಿ ಮೇಳದವರಿಂದ “ನಮೋ ರಘುವಂಶ ದೀಪ” ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.