ಬಂಟ್ವಾಳ: ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಮನೆಯೊಂದರ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ, ಸಂತ್ರಸ್ತೆ ವಾರಿಜ ಎಂಬವರಿಗೆ ಶಾಸಕ ರಾಜೇಶ್ ನಾಯ್ಕ್ ಅವರಿಂದ ಬಿಡುಗಡೆ ಮಾಡಲಾಗಿರುವ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.


ಘಟನೆ ನಡೆದ ದಿನ ಕಳ್ಳಿಗೆ ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಂತ್ರಸ್ತರಿಗೆ ನೆರವಾಗುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಳಿ ವಿನಂತಿಸಿದ್ದರು.
ಕೂಡಲೇ ಸ್ಪಂದಿಸಿದ ಶಾಸಕರು ಪ್ರಕೃತಿ ವಿಕೋಪ ನಿಧಿಯಿಂದ ಸುಮಾರು 95,100 ರೂ. ಪರಿಹಾರವನ್ನು ಸಂತ್ರಸ್ತರಿಗೆ ಮಂಜೂರು ಮಾಡಿದ್ದಾರೆ.
ಜನತಾಕರ್ಫ್ಯೂ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರು ಬಂಟ್ವಾಳ ಶಾಸಕರ ಪರವಾಗಿ ಕಳ್ಳಿಗೆ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆಯವರ ನೇತೃತ್ವದಲ್ಲಿ ಚೆಕ್ಕನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ರೇಶ್ಮಾ ಸತೀಶ್ ಬೆಂಜನಪದವು ಉಪಸ್ಥಿತರಿದ್ದರು.












