ನಿಮಗೆಲ್ಲಾ ಋಣಾತ್ಮಕ ಮತ್ತು ಧನಾತ್ಮಕ ಆಲೋಚನೆಗಳ ಬಗ್ಗೆ ಸ್ವಲ್ಪ ಹೇಳೋಣಾಂತ ಈ ವಾರ. ಬದುಕು ಕಟ್ಟುವ ಕಾರ್ಯ ಧನಾತ್ಮಕ ಆಲೋಚನೆಗಳಿಂದಾದರೆ ಬದುಕು ಮುರಿಯುವ ಕಾರ್ಯ ಋಣಾತ್ಮಕ ಆಲೋಚನೆಗಳಿಂದ ಆಗುತ್ತದೆ. ಯಾರಾದರೂ ಉತ್ತಮ ಕಾರ್ಯ ಮಾಡಲು ಹೊರಟರೆ, “ಅವನಿಗೆ ಹುಚ್ಚು ಹಟ, ಅದನ್ನವ ಮಾಡ್ಲಿಕ್ಕುಂಟಾ…” ಹೀಗೆ ಹೇಳುವವರೇ ಹೊರತು ಪ್ರಯತ್ನಿಸು ಎಂದು ಹುರಿದುಂಬಿಸುವವರು ಕಡಿಮೆಯೇ..
ಧನಾತ್ಮಕವಾಗಿ ಆಲೋಚಿಸುವವನು ಬೆಳೆಯುತ್ತಾ ಹೋಗುವನು. ಋಣ ಎಂದರೇನೇ ಕಳೆ ಎಂದರ್ಥ. ಋಣ ಆಲೋಚನೆಗಳು ಬಂದರೆ ಜೀವನವೂ ಋಣವಾಗುತ್ತಾ, ಏರುವ ಬದಲು ನಾವು ಇಳಿಯಲು ಪ್ರಾರಂಭಿಸುತ್ತೇವೆ. ಮನಗಳನ್ನು, ಕಾರ್ಯಗಳನ್ನು, ಸಾಧನೆಗಳನ್ನು ಗೌರವಿಸಲು, ಉತ್ತೇಜಿಸಲು ಕಲಿಯಬೇಕಿದೆ ನಾವಿನ್ನೂ. ನಾವಿಂದು ದೂರುವುದು, ತಪ್ಪುಗಳನ್ನು ಹುಡುಕುವುದರಲ್ಲೆ ಮೈಮರೆತಿದ್ದೇವೆ. ಬೇರೆಯವರನ್ನು ಹೊಗಳುವುದೆಂದರೆ ನಮಗೆ ಅಲರ್ಜಿ. ಬದಲಾಗಿ ಇತರರ ಬಗ್ಗೆ ಬೇಡದ ಕೀಳು ಮಾತನಾಡುವುದರಲ್ಲೆ ಸಂತಸ ಪಡುವವರು ಅನೇಕರಿಹರು.
ಅದು ತಪ್ಪು. ಬದಲಾಗಿ ಯಾರೇನೇ ಹೊಸದನ್ನು ಮಾಡಲು ಹೊರಡಲಿ, ನಾವದನ್ನು ಪ್ರೋತ್ಸಾಹಿಸಲು ಕಲಿಯೋಣ. ನಮ್ಮ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ದೊರೆಯುವ ಒಳ್ಳೆಯತನವನ್ನು ಕಲಿಯೋಣ.
ನಮ್ಮ ಕೆಟ್ಟ ಗುಣಗಳು ಅನ್ನಿಸಿದ್ದನ್ನು ತೊರೆಯೋಣ. ಇತರರನ್ನು ಗೌರವಿಸಲು ಕಲಿಯೋಣ. ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಗಾದೆಯಂತೆ ಇತರರನ್ನು ಕೆಣಕದೆ, ಅವರನ್ನು ಬದುಕಲು ಬಿಟ್ಟು ನಾವೂ ಬದುಕೋಣ.
ಉದಾತ್ತ ಆಲೋಚನೆಗಳನ್ನು ಬೆಳೆಸಿಕೊಂಡು, ಉದಾತ್ತ ಮಾತುಗಳನ್ನಾಡುತ್ತಾ, ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡು ನಾವೇ ನಮ್ಮ ಜೀವನವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯೋಣ. ನೀವೇನಂತೀರಿ?

@ಪ್ರೇಮ್@