ವರುಣನಾರ್ಭಟ ಎಂದಿನಂತಿಲ್ಲವಾದರೂ ಮಳೆ ಬಂದು ತೊಯ್ದಿರುವೆಂಬ ಖುಷಿಯಿದೆಯಲ್ಲವೇ..ಮೊದಲ ಮಳೆಯಲಿ ನೆನೆಯುವ ಸಂತಸ ಅದು ಪಡೆದವರಿಗೇ ಗೊತ್ತು. ವರ್ಣಿಸಲಸದಳ ಆನಂದ! ಗಿಡ ಮರ ಚಿಗುರಿಗೂ ಇದೇ ಇಷ್ಟ. ಒಂದು ಮಳೆ ಬಿದ್ದೊಡೆ ಚಿಗುರುಗಳು ಉದ್ದವಾಗಿ ಬೆಳೆಯುತ್ತವೆ. ಹೂವಿನ ಮೊಗ್ಗು ಕಾಣಿಸತೊಡಗುತ್ತದೆ. ಗಿಡ ಸಂತಸದಿ ಬೀಗುತ್ತದೆ. ಲೆಕ್ಕಾಚಾರಗಳ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯನಾಶ ಮಾಡಿದ ಜಿಲ್ಲೆಗಳೆಂದರೆ ಉಡುಪಿ ಮತ್ತು ದಕ್ಷಿಣ ಕನ್ನಡ. ಅದು ಸರಿಯಾಗಬೇಕಾದರೆ ನಾಶ ಮಾಡಿದ ಮರಗಳನ್ನು ನೆಡಲು ಸಾಧ್ಯವಿಲ್ಲ, ಗಿಡಗಳನ್ನಾದರೂ ನೆಡಬೇಕಲ್ಲವೇ? ಗಿಡನೆಡಲಿ ಈಗ ಸರಿಯಾದ ಸಮಯ. ಸಾಲುಮರದ ತಿಮ್ಮಕ್ಕನಂತೆ ನಾವು ಸತ್ತರೂ ನಮ್ಮ ಹೆಸರು ಹೇಳಲು ಕೆಲವು ಮರಗಳಿರಲಿ, ಪ್ರತಿಯೊಬ್ಬರ ಹೆಸರಿನಲ್ಲೂ ಕನಿಷ್ಟ ಐದು ಮರಗಳಾದರೂ ನಮ್ಮ ವಯಸ್ಸಿನೊಂದಿಗೇ ಬೆಳೆಯಲಿ. ನಮ್ಮ ಮಕ್ಕಳ ಹೆಸರಿನಲ್ಲಿ ಇನ್ಶೂರೆನ್ಸ್ ಪಾಲಿಸಿ ಮಾಡಿದ ಹಾಗೆ ಒಂದು ಹತ್ಹತ್ತು ಮರಗಳನ್ನೂ ನೆಟ್ಟು ಬೆಳೆಸಿಟ್ಟರೆ ಹೇಗೆ?ಹೊನ್ನೆ, ತೇಗ, ಬೀಟೆ, ಹಲಸಾದರೆ ಬೆಲೆ ಬಾಳದೇ? ಇತರ ಮರಗಳಾದರೆ ಶುದ್ಧ ಆಮ್ಲಜನಕ ಕೊಟ್ಟು ಮುಂದೆ ಅವರನ್ನು ಆರೋಗ್ಯವಂತರಾಗಿ ಸಾಕದೇ?
ಈಗ ನೆಟ್ಟ ಗಿಡಕ್ಕೆ ಬುಡಕ್ಕೆ ಸ್ವಲ್ಪ ಗೊಬ್ಬರ ಹಾಕಿ ಬಿಟ್ಟರಾಯಿತು! ನೀರು ಪ್ರಕೃತಿಯೇ ಒದಗಿಸುತ್ತದೆ. ಸೂರ್ಯನ ಬೆಳಕನ್ನದು ಉಪಯೋಗಿಸಿಕೊಳ್ಳುತ್ತದೆ. ಸರಿಯಾಗಿರುವ ಯಾವ ಬೀಜಗಳೂ “ನಾನು ಚಿಗುರಲಾರೆ ಮಾನವ ಏನು ಮಾಡಿಕೊಳ್ಳುತ್ತೀಯ ಮಾಡಿಕೋ” ಎಂದು ನಮ್ಮ ಹಾಗೆ ಕೋಪಿಸಿಕೊಳ್ಳಲಾರವು! ಸ್ವಲ್ಪ ಅವಕಾಶ, ಮಣ್ಣು, ನೀರು ಸಿಕ್ಕಿದರೆ ಸಾಕು, ತನ್ನಷ್ಟಕ್ಕೆ ತಾನೇ ನಗುತ್ತಾ ಪುಟ್ಟ ಗಿಡಗಳು ಇಣುಕಲಾರಂಭಿಸುತ್ತವೆ!
ಅವುಗಳಿಗೂ ಸ್ವಲ್ಪ ಬಾಳಿ ಬದುಕಲು ಅವಕಾಶ ಮಾಡಿಕೊಡೋಣ. ಅವು ಉಪಕಾರ ಮಾಡುವವೇ ಹೊರತು ಕೆಲ ಕೀಳು ಮನುಷ್ಯರಂತೆ ಉಪದ್ರವಂತೂ ಮಾಡಲಾರವು!
ನಮ್ಮ ಕೊಡುಗೆಯಾಗಿ ಭೂಮಿಗೆ ನಾವು ಗಿಡಗಳನ್ನು ಮಾತ್ರ ಕೊಡಲು ಸಾಧ್ಯ. ಹೆತ್ತು, ಹೊತ್ತು, ಸಲಹುವ ಭೂತಾಯಿಗೆ ನಮ್ಮದೊಂದು ಸಣ್ಣ ಉಡುಗೊರೆ ಕೊಡಲಾರೆವೇ? ನೀವೇನಂತೀರಿ?

@ಪ್ರೇಮ್@