ದಿನಾ ಬೆಳಗ್ಗೆ ಎದ್ದು ಹೋಗುವ ನನ್ನ ಸಣ್ಣ ವಾಕಿಂಗ್ ಗೆ ನನಗೆ ಸಾಥ್ ಕೊಡುವವರು ಯಾರು ಗೊತ್ತೇ? , ನಾಯಿಗಳನ್ನು ನಮ್ಮದೆಂದು ಸಾಕಿ ಕೇರ್ ಇಲ್ಲದೆ ಊರು ತಿರುಗಲು ಬಿಟ್ಟಂತಹ ಮನೆಯವರ ನಾಯಿ ಗ್ಯಾಂಗ್ ಹಾಗೂ ನಮ್ಮ ಬಿಸಿಲಿನ ದಾಹ ಹಾಗೂ ನಾಲಗೆಯ ತೃಷೆ ಇಂಗಿಸಿ ಭೂಮಿತಾಯಿಯ ಒಡಲು ಸೇರಿದ ಕರಗದ ಪ್ಲಾಸ್ಟಿಕ್ ಬಾಟಲಿಗಳು “ನಾವಿದ್ದೇವೆ ನಿಮಗೆ ಸಾಥ್ ನೀಡಲು” ಎನ್ನುವಂತೆ ತಲೆ ಎತ್ತಿ ನಿಂತಿರುತ್ತವೆ.
ಈಗಿನ ಕಾಲದಲ್ಲಿ ಟಚ್ ಸ್ಕ್ರೀನ್ ಮೊಬೈಲ್ ಹಳ್ಳಿಯ ಮೂಲೆ ಮೂಲೆಯ ಜನರ ಕೈಯಲ್ಲೂ ನಲಿದಾಡುತ್ತಿರುವಾಗ, ಕೇಳಿ, ಓದಿ, ನೋಡಿ, ವಿಷಯಗಳನ್ನು ಚರ್ಚಿಸಿ ಜನ ಬುದ್ಧಿವಂತರಾಗಿದ್ದಾರೆ. ದಡ್ಡರಾರೂ ಇಲ್ಲ. ಪೋಷಕರಿಗೆ ತಿಳಿಯದಿದ್ದರೆ ಬುದ್ಧಿಯನ್ನು ತಾವೇ ಕಲಿಸುವ ಮಕ್ಕಳಿದ್ದಾರೆ ಈಗ! ಅಂಥದ್ದರಲ್ಲಿ ತಾವು ವಾಸಿಸುವ ಭೂಮಿಯ ಮಡಿಲಿಗೆ ಕರಗದ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯದಿರುವಂತೆ ಮತದಾನ ಜಾಗೃತಿ ಮಾಡಿದ ಹಾಗೆ ಪ್ಲಾಸ್ಟಿಕ್ ನಿಷೇಧ ಜಾರಿ ಮಾಡಬೇಕೇನೋ!
ಅಲ್ಲದೇ ಸಣ್ಣ ಸಣ್ಣ ಮಧು, ಪಾನ್ ಪರಾಗ್ ಮೊದಲಾದ ಅಡಿಕೆಮಿಶ್ರಿತ ಪುಡಿ ತಿನ್ನುವ ಚಟದವರು ಹಳ್ಳಿಯ ಗಲ್ಲಿ ಗಲ್ಲಿಗಳಲ್ಲೂ ಇರುವುದರಿಂದ ಅವುಗಳ ರಾಶಿ ರಾಶಿ ಪ್ಯಾಕೆಟ್ ಗಳು ಎಲ್ಲೆಂದರಲ್ಲಿ ಸಿಗುತ್ತವೆ. ಉಪಯೋಗಿಸಿ ಬಿಸಾಕಿದ ನೀರಿನ ಹಾಗೂ ಜ್ಯೂಸ್ ಬಾಟಲುಗಳು, ಪ್ಲಾಸ್ಟಿಕ್ ಕವರುಗಳ ಮರುಬಳಕೆ ಇಲ್ಲವೇ ಸರಿಯಾದ ವಿಲೇವಾರಿಗೆ ಕ್ರಮ ಭಾರತದ ಯಾವ ಹಳ್ಳಿಯಲ್ಲಿದೆ? ಯಾವ ಕಸದ ತೊಟ್ಟಿಯಿಂದ ದನ ಕರುಗಳು ಪ್ಲಾಸ್ಟಿಕ್ ಸಮೇತ ಬಿಸಾಕಿದ ಊಟ ತಿಂದು ಸತ್ತು ಹೋಗುವುದನ್ನು ನಾವು ಕಣ್ಣಾರೆ ಕಾಣುತ್ತಲೇ ಮನೆಯಲ್ಲಿ ಉಳಿದ ಆಹಾರವನ್ನು ಕವರ್ನೊಳಗೆ ಹಾಕಿ ಡಸ್ಟ್ ಬಿನ್ ಬದಿಯಲ್ಲೋ, ಯಾರೂ ಕಾಣದ ರಸ್ತೆಯಲ್ಲೋ ಎಸೆವಂಥ ಕಳ್ಳರು ಭಾರತದಲ್ಲಿ ಇರುವವರೆಗೆ ಸ್ವಚ್ಛ ಭಾರತ ಸಾಧ್ಯವಾಗದು. ನಾವಾದರೂ ನಮಿಮ ಮನೆಗಳಲ್ಲಿ ಬಳಸುವ ಪ್ಲಾಸ್ಟಿಕ್ ವಸ್ತುಹೊಗಳನ್ನೆಲ್ಲ ಪಂಚಾಯತ್ ಗಾಡಿಗೋ, ಗುಜಿರಿಗೋ ಹಾಕೋಣ. ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆದು ನಮ್ಮ ಪ್ರಕೃತಿಯ ನಾಶ ಮಾಡದಿರೋಣ. ನೀವೇನಂತೀರಿ?

@ಪ್ರೇಮ್@