ವಿಟ್ಲ: ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ವತಿಯಿಂದ ಮೂರುಕಜೆಯ ಮೈತ್ರೇಯಿ ಗುರುಕುಲದ ಸಹಕಾರದಲ್ಲಿ ವಿಟ್ಲ ಸುತ್ತಮುತ್ತಲಿನ ಎಲ್ಲಾ ಬಾಲಗೋಕುಲ ಮಕ್ಕಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಆ. 23ರಂದು ನಡೆಯಲಿದೆ ಎಂದು ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ಸಿ.ಎಚ್ ತಿಳಿಸಿದರು.
ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಳಗ್ಗೆ 9 ಗಂಟೆಗೆ ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಉದ್ಯಮಿ ಶ್ರೀಧರ ಪೈ ಅವರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಕೀಲ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಳಿಯ ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್‌ನ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ದೇಶಿಯ ಅಧ್ಯಾಪಕ್ ಪರಿಷತ್ ಕೇರಳ ಪ್ರಾಂತ ಸಂಘಟನಾ ಕಾರ್ಯದರ್ಶಿ ಅಶೋಕ್ ಬಾಡೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಉಕ್ಕುಡ ದರ್ಭೆ ಶ್ರೀ ಶಾರದಾ ಪ್ರೋಸೆಸರ್‍ಸ್ ಮಾಲಕ ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ಕೃಷ್ಣಯ್ಯ ಕೆ. ಅವರ ಸಂಯೋಜನೆಯಲ್ಲಿ ನೃತ್ಯರೂಪಕ ಪೊರ್ಲ ತುಳುನಾಡ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಆಲಂಗಾರು, ಗೌರವಾಧ್ಯಕ್ಷ ಕೃಷ್ಣಯ್ಯ ಕೆ, ಮಾಜಿ ಅಧ್ಯಕ್ಷರಾದ ಜಗದೀಶ ಪಾಣೆಮಜಲು, ನಾಗೇಶ್ ಬಸವನಗುಡಿ ಉಪಸ್ಥಿತರಿದ್ದರು.

