ಬಂಟ್ವಾಳ: ಭಾರತೀಯ ಜೈನ್ ಮಿಲನ್ ನ ಶಾಖೆ, ಬಂಟ್ವಾಳ ಜೈನ್ ಮಿಲನ್ ನ ಸಪ್ಟೆಂಬರ್ ತಿಂಗಳ ಮಾಸಿಕ ಸಭೆಯು ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ ದಿನಾಂಕ 10.09.2021 ರಂದು ನಡೆಯಿತು.

ಪ್ರತಿ ವರ್ಷದಂತೆ ಸೋಣ ತಿಂಗಳ ಕೊನೆಯ ಶುಕ್ರವಾರದಂದು ಮದಿಮೆತ್ತಿಮಾರು ನಮಿರಾಜ್ ಜೈನ್ ಕುಟುಂಬಿಕರ ಆತಿಥ್ಯದಲ್ಲಿ ಮಾಸಿಕ ಸಭೆ ನಡೆಯಿತು.
ಮಿಲನ್ ಅಧ್ಯಕ್ಷ ವೀರ್ ಡಾ. ಸುದೀಪ್ ಕುಮಾರ್ ಪ್ರಸ್ತಾವನೆಯೊಂದಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಪ್ರತಿ ವರ್ಷದಂತೆ SSLC ಹಾಗೂ PUC ಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಜೈನ್ ಮಿಲನ್ ನ ಎಲ್ಲಾ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು. ವೀರ್ ಹರ್ಷರಾಜ್ ಸಮಾರಂಭದ ಮುಖ್ಯ ಅತಿಥಿ ವೀರ್ ಫ್ರೊ.ವೃಷಭರಾಜ್ ಜೈನ್ ರವರನ್ನು ಪರಿಚಯಿಸಿದರು.
ಮುಖ್ಯ ಅತಿಥಿ ವೀರ್ ವೃಷಭರಾಜ್ ತಮ್ಮ ಅತಿಥಿ ಭಾಷಣದಲ್ಲಿ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಅಭಿನಂದಿಸಿದರು. ಇಂದಿನ ವಾಸ್ತವಿಕ ದಿನಮಾನದಲ್ಲಿ ವಿದ್ಯಾರ್ಥಿಗಳು ತಾವು ಪಡೆಯುವ ಅಂಕಗಳಿಗೆ ಕೇವಲ 20℅ಮೌಲ್ಯವಿರುತ್ತದೆ(IQ ), ಉಳಿದಂತೆ 70℅ ಸಾಮಾಜಿಕ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾರೆ(EQ), ಹಾಗೂ 10℅ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮೌಲ್ಯಗಳಿಗೆ (SQ) ಎಂಬುದಾಗಿ ವಿಗಂಡಿಸಿ, ಈ ಪ್ರಕಾರವಾಗಿ ತಮ್ಮ ವ್ಯಕ್ತಿತ್ವವನ್ನು ಬೆಳಸಬೇಕು ಎಂದು ವಿದ್ಯಾರ್ಥಿ, ಪೋಷಕರಿಗೆ ತಿಳಿಸಿದರು.
ಮೊಬೈಲ್ ಬಳಕೆಯ ಸಾಧಕ ಭಾದಕಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ವತಿಯಿಂದ ವರ್ಷಂಪ್ರತಿ ನಡೆಯುವ ಪ್ರತಿಭಾ ಪುರಸ್ಕಾರ ನಿಧಿಗೆ ₹25000/ ಮೊತ್ತದ ದೇಣಿಗೆಯನ್ನು ವೀರ್ ವೃಷಭರಾಜ್ ಜೈನ್ ನೀಡಿದರು.
ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಅಧ್ಯಕ್ಷ ವೀರ್ ಸುದರ್ಶನ್ ಜೈನ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹಾಗೂ ಜೀವನ ಶೈಲಿಗಳನ್ನು ಬೆಳೆಸಿ ಸಮಾಜಕ್ಕೆ ಉತ್ತಮ ಹೆಸರು ತರಬೇಕೆಂದು ವಿವರಿಸಿದರು, ಅಲ್ಲದೇ ಜೈನ್ ಮಿಲನ್ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದ್ದು ದುಬೈ, ಲಂಡನ್, ಜರ್ಮನಿ ಹಾಗೂ ಆಸ್ಟ್ರೇಲಿಯಾದಲ್ಲಿ ನೂತನ ಜೈನ್ ಮಿಲನ್ ಶಾಖೆಗಳ ಬಗ್ಗೆ ಮಾಹಿತಿ ನೀಡಿದರು.
ವೀರಾಂಗನಾ ವಿಜಯಕುಮಾರಿ ಇಂದ್ರ ರವರು ಶ್ರಾವಕರಿಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಮಿಲನ್ ಅಧ್ಯಕ್ಷ ವೀರ್ ಡಾ.ಸುದೀಪ್ ಕುಮಾರ್ ಎಲ್ಲರನ್ನೂ ಅಭಿನಂದಿಸಿದರು ಹಾಗೂ ವಿಶೇಷವಾಗಿ ಮಿಲನ್ ನಿಧಿಗೆ ದೇಣಿಗೆಯನ್ನು ನೀಡಿದ ವೀರ್ ವೃಷಭರಾಜ್ ಜೈನ್ ದಂಪತಿಗಳ ಸಮಾಜಮುಖಿ ಕಾಳಜಿಯನ್ನು ಪ್ರಶಂಸಿಸಿದರು.
ಮಿಲನ್ ಕಾರ್ಯದರ್ಶಿ ವೀರಾಂಗನಾ ಸನ್ಮತಿ ಜಯಕೀರ್ತಿ ಧನ್ಯವಾದ ಸಮರ್ಪಿಸಿದರು. ವೀರಾಂಗನಾ ವಿಜಯಕುಮಾರಿ ಇಂದ್ರ ಕಾರ್ಯಕ್ರಮ ನಿರೂಪಿಸಿದರು.

