ಸುಳ್ಯ : ಹಿಂದಿ ದಿವಸ್ ಅಂಗವಾಗಿ ಏರ್ಪಡಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನ ವಿದ್ಯಾರ್ಥಿನಿ ಸ್ನಿಗ್ಧ ಎಮ್.ಜೆ. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಮಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ವತಿಯಿಂದ 2020 ರ ಹಿಂದಿ ದಿನಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೆ.7 ರಿಂದ 12 ರ ಅವಧಿಯಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ಸಿದ್ಧಪಡಿಸಿದ ಭಾಷಣದ ವಿಡಿಯೋವನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಮಡಿಕೇರಿ ಜಿಲ್ಲೆಗಳ ಸುಮಾರು 40 ಕಾಲೇಜುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ತೀರ್ಪುಗಾರರ ತಂಡ ಐವರು ವಿಜೇತರನ್ನು ಆಯ್ಕೆ ಮಾಡಿದೆ.


ಸೆ.14 ರ ಹಿಂದಿ ದಿನಾಚರಣೆಯಂದೇ ಫಲಿತಾಂಶ ಪ್ರಕಟಿಸಲಾಗಿದ್ದು, ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನ ವಿದ್ಯಾರ್ಥಿನಿ ಸ್ನಿಗ್ಧ ಎಮ್.ಜೆ. ಪ್ರಥಮ, ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಶೃತಿ ಶ್ರೀಕಾಂತ ಶಾನಭಾಗ್ ದ್ವಿತೀಯ ಬಹುಮಾನ ಪಡೆದರು. ತೃತೀಯ ಬಹುಮಾನವನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದು, ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿನಿ ಪವಿತ್ರ ನಾಯಕ್, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಲ್ಲವಿ ಕೆ. ಹಾಗೂ ಮಂಗಳೂರು ರಥಬೀದಿಯ ಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಸಾರ್ ಅಹಮದ್ ಆಯ್ಕೆಯಾದರು. ಬಹುಮಾನ ನಗದು ಹಾಗೂ ಆನ್ ಲೈನ್ ಪ್ರಮಾಣ ಪತ್ರವನ್ನು ಒಳಗೊಂಡಿತ್ತು. ಮಂಗಳೂರು ಕಾರ್ ಸ್ಟ್ರೀಟ್ ಕಾಲೇಜಿನ ಡಾ.ಶಿವರಾಮ ಪಿ ಮತ್ತು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಕೆ.ಎಸ್. ರವರು ಸ್ಪರ್ಧೆಯನ್ನು ಸಂಯೋಜಿಸಿದ್ದರು.












