ಮಂಗಳೂರು : ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಗುಡ್ಡ ಕುಸಿತವುಂಟಾಗಿದ್ದು, ಆಸ್ತಿಪಾಸ್ತಿ ಹಾನಿಯುಂಟಾಗಿದೆ. ಮಂಗಳೂರಿನ ನೀರುಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿ ಕಾಂಕ್ರಿಟ್ ರಸ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ.
ಕಾಂಕ್ರಿಟ್ ರಸ್ತೆ ಮಧ್ಯೆ ಭಾಗ ಧರಶಾಹಿಯಾಗಿದೆ. ಕೆಲ್ರಾಯಿ- ಬಿತ್ತುಪಾದೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ಈ ಘಟನೆ ಸಂಭವಿಸಿದೆ. ಮುಂಜಾನೆಯಿಂದಲೇ ಸುರಿದ ಭಾರೀ ಮಳೆಗೆ ರಸ್ತೆ ಕುಸಿತಗೊಂಡಿದೆ. ರಸ್ತೆ ಕುಸಿತದಿಂದಾಗಿ ಎರಡು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಮಾಜಿ ಶಾಸಕ ಮೊಯ್ದಿನ್ ಬಾವಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














