ಬಂಟ್ವಾಳ: ಶಾಸಕರು ಕಾಮಗಾರಿಗೆ ಮೀಸಲಿಟ್ಟ ಹಣವನ್ನು ತನ್ನ ಅವಧಿಯ ಪ್ರಯತ್ನದಿಂದ ಆಗಿದೆ ಎಂದು ರಮಾನಾಥ ರೈ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಇದು ರೈ ಅವರ ನರಿ ಬುದ್ದಿಯನ್ನು ತೋರಿಸಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ. ಅವರು ಬಿಸಿರೋಡಿನ ಹೋಟೆಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕಿನ ಕೆಲವು ರಸ್ತೆಗಳ ಕಾಮಗಾರಿಗೆ ರೇವಣ್ಣ ಹಣ ಮಂಜೂರು ಮಾಡಿದ್ದಾರೆ ಎಂದು ಪತ್ರಿಕೆಗೆ ನೀಡಿರುವ ಮಂಜೂರಾತಿ ಪತ್ರದಲ್ಲಿ ಲೆಟರ್ ಹೆಡ್ ಹಾಗೂ ಸಹಿ ಇಲ್ಲವಾಗಿದ್ದು ಇದು ಇವರೇ ಸೃಷ್ಟಿಸಿದ ಪತ್ರವಾಗಿದೆ ಎಂದು ಬಲವಾಗಿ ಆರೋಪಿಸಿದರು.
ಈ ರೀತಿಯಲ್ಲಿ ಸುಳ್ಳು ಹೇಳಿ ಜನರ ದಾರಿತಪ್ಪಿಸುವ ರೈ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ, ಇಲ್ಲವಾದರೆ ಇವರ ರಾಜಕೀಯ ಅದಃಪತನವಾಗುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಸೋತ ಬಳಿಕ ರೈ ಅವರ ರೀತಿಯಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡುವ ವ್ಯಕ್ತಿಗಳು ಇಡೀ ರಾಜ್ಯದಲ್ಲಿ ಯಾರು ಇಲ್ಲ ಎಂದ ಅವರು ಇದು ಅವರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಸುದ್ದಿಗೊಷ್ಟಿಯಲ್ಲಿ ಪ್ರಮುಖರಾದ ತುಂಗಪ್ಪ ಬಂಗೇರ, ದೇವದಾಸ್ ಶೆಟ್ಟಿ, ಸಂದೇಶ್ ಶೆಟ್ಟಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ವಾಮದಪದವು, ಸುದರ್ಶನ್ ಬಜ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು.

