ಬಂಟ್ವಾಳ, ಆ. ೭: ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಆದರೆ, ಬುಧವಾರ ರಾತ್ರಿ ಗಾಳಿಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಕೃತಕ ನೆರೆ, ಮನೆಗಳಿಗೆ ಹಾನಿ, ಗುಡ್ಡ ಜರಿದು ತೊಂದರೆ, ರಸ್ತೆಯಲ್ಲಿ ನೀರು, ಕೆಸರು ತುಂಬಿ ಸಮಸ್ಯೆಗಳಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಗುರುವಾರದಂದು ಒಟ್ಟು ೫೩ ಹಾನಿ ಪ್ರಕರಣಗಳು ವರದಿಯಾಗಿವೆ.

ಇವುಗಳಲ್ಲಿ ೬ ಮನೆಗಳಿಗೆ ಸಂಪೂರ್ಣ ಹಾನಿ, ೩೦ ಮನೆಗಳು ಭಾಗಶಃ ಹಾನಿ, ೫ ತೋಟಗಾರಿಕಾ ಹಾನಿ ಹಾಗೂ ೧೨ ಇತರ ಹಾನಿಗಳಾಗಿರುವ ಬಗ್ಗೆ ವರದಿಯಾಗಿವೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ಭಾರೀ ಮಳೆ ಹಾನಿ:
ಕುಡಂಬೆಟ್ಟು ಗ್ರಾಮದ ಶಾರದಾ ಹಾಗೂ ಬಾಬು ಮನೆಗಳಿಗೆ ಭಾಗಶಃ ಹಾನಿ, ಬಸ್ತಿಕೋಡಿಯ ಲಕ್ಷ್ಮಣ ಗಟ್ಟಿ ಎಂಬವರ ತೋಟಕ್ಕೆ ಹಾನಿ, ಕಾವಳಪಡೂಡು ಗ್ರಾಮದ ಜೆಫ್ರಿರೋಡ್ರಿಗಸ್ ಅಡಿಕೆ ಮರಗಳಿಗೆ ಹಾನಿ, ಕೊಯಿಲ ಗ್ರಾಮದ ಹರಿಣಾಕ್ಷಿ ಎಂಬವರ ನಿರ್ಮಾಣ ಹಂತದಲ್ಲಿರುವ ಮನೆಗೆ ಹಾನಿ, ಕೊಯಿಲ ಗ್ರಾಮದ ಪ್ರೇಮ ಎಂಬವರ ಮನೆಗೆ ಭಾಗಶಃ ಹಾನಿ, ಮಣಿನಾಲ್ಕೂರು ಗ್ರಾಮದ ಕೃಷ್ಣಪ್ಪ ನಾಯ್ಕ್ ಮನೆಯ ಗುಡ್ಡ ಜರಿದು ಹಾನಿ, ರಾಯಿ ಗ್ರಾಮದ ರಹಿಮತ್ ಹಾಗೂ ಕೆದಿಲ ಗ್ರಾಮದ ವಾಸು ಎಂಬವರ ಮನೆಗಳಿಗೆ ಭಾಗಶಃ ಹಾನಿ, ಕುಂಟ್ರಕಳ ನಿವಾಸಿ ಜಾನಕಿ ಎಂಬವರ ಕೃಷಿಗೆ ಹಾನಿ, ಕೈರಂಗಳ ಗ್ರಾಮದ ಕಾಲುದಾರಿ ಕುಸಿದು ಸಂಕರ್ಪ ಕಡಿತ, ಬಡಗಕಜೆಕಾರು ಗ್ರಾಮದ ಬಾಲಕೃಷ್ಣ ಎಂಬವರ ೭೦ ಅಡಿಕೆ ಮರ, ೫ ತೆಂಗಿನ ಮರಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದೆ.
ಶಾಸಕರ ಬೇಟಿ: ಮಳೆಯಿಂದ ಹಾನಿಗೀಡಾದ ಹಾಗೂ ಜಲಾವೃತಗೊಂಡ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಬೇಟಿ ನೀಡಿದರು.
ಕಾವಳಮೂಡೂರು ಗ್ರಾಮದಲ್ಲಿ ಭಾರಿ ಗಾಳಿಗೆ ಸೀತಾರಾಮ ಶೆಟ್ಟಿ ಐಚ್ಚಿಲರವರ ಮನೆಯ ಮೆಲ್ಛಾವಣಿ ಹಾರಿಹೋಗಿದ್ದು 200ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕಚ್ಚಿದ್ದು ಇಲ್ಲಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಭಾರಿ ಮಳೆಗೆ ಭೂಕುಸಿತದಿಂದಾಗಿ ಅಲ್ಲಿಪಾದೆಯ ರಾಮ ಮೂಲ್ಯರ ಮನೆಗೆ ಹಾನಿಯಾಗಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.
ಮಾಜಿ ಸಚಿವ ರೈ ಬೇಟಿ: ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಬೇಟಿ ನೀಡಿದರು.