ವಿಟ್ಲ: ತಾಲೂಕು ಪಂಚಾಯಿತಿ ಸದಸ್ಯರು ಎರಡು ವರ್ಷಗಳಿಂದ ಗ್ರಾಮ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಈ ಬಾರಿಯ ಗ್ರಾಮ ಸಭೆಗೆ ಗೈರು ಹಾಜರಾಗಿದ್ದಾರೆ. ಅವರು ಬಾರದೇ ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ ಎಂದು ಅಳಿಕೆ ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ನಡೆದಿದೆ.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅಧ್ಯಕ್ಷರು ಗ್ರಾಮ ಸಭೆಗೆ ಅವರಿಗೆ ನೊಟೀಸ್ ನೀಡಲಾಗುತ್ತಿದೆ. ಅವರು ಆಗಮಿಸಿಲ್ಲ. ಜನರ ಬೇಡಿಕೆಗಳನ್ನು ಅವರಿಗೆ ತಿಳಿಸಲಾಗುವುದು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಮುಂದಿನ ಗ್ರಾಮ ಸಭೆಗೆ ಹಾಜರಾಗದಿದ್ದಲ್ಲಿ ಗ್ರಾಮ ಸಭೆಯನ್ನು ಬಹಿಷ್ಕಾರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಸರಕಾರಿ ಶಾಲೆಗಳಲ್ಲಿ ನೂತನವಾಗಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಗೊಂಡಿರುತ್ತದೆ. ಮುಂದಿನ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಮಾತ್ರ ಸೀಮಿತವೇ? ಅಥವಾ ಒಂದನೇ ತರಗತಿ ಪ್ರಾರಂಭಿಸುವ ಬಗ್ಗೆ ಯೋಜನೆ ಇದೆಯಾ? ಈ ಬಗ್ಗೆ ಜನರಲ್ಲಿ ಗೊಂದಲವಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು. ವಯೋಮಿತಿಯ ಬಗ್ಗೆ ಕೆಲವು ಕಡೆಗಳಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಅಳಿಕೆ ಗ್ರಾಮದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳಿವೆ. ಮಳೆಗಾಲದಲ್ಲಿ ಅದು ನೆಲಕ್ಕೆ ಬೀಳುವ ಹಂತದಲ್ಲಿ ತಕ್ಷಣವೇ ಅವುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಪುತ್ತೂರು, ವಿಟ್ಲ, ಅಳಿಕೆ, ಕನ್ಯಾನ, ಆನೆಕಲ್ಲು, ಬಾಕ್ರಬೈಲು, ಮುಡಿಪು, ದೇರಳಕಟ್ಟೆ ಮೂಲಕ ಮಂಗಳೂರಿಗೆ ಕರ್ನಾಟಕ ರಸ್ತೆ ಸಾರಿಗೆ ಬಸ್ ಒದಗಿಸಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ತಕ್ಷಣವೇ ತಂತಿಗಳನ್ನು ಬದಲಾಯಿಸಬೇಕು. ಶಾರದಾ ವಿಹಾರದ ಸಮೀಪ ಮರ ಎಚ್‌ಟಿ ಲೈನ್‌ನ ಮೇಲೆ ಬೀಳುವ ಹಂತದಲ್ಲಿದೆ. ಇದರಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಬಹುದು. ಸಮಸ್ಯೆ ಆದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಎಚ್ಚೆತ್ತುಕೊಂಡರೆ ಉತ್ತಮ ಎಂದು ಹೇಳಿದರು. ದಾರಿ ದೀಪಗಳ ಬಗ್ಗೆ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಅವರು ದಾರಿ ದೀಪದ ಜವಾಬ್ದಾರಿ ಜನರ ಮೇಲೆಯೂ ಇದೆ. ಸರಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಬಾರದು. ಅದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ನೋಣಯ್ಯ ನಾಯ್ಕ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ನಾನಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ, ಪಿಡಿಒ ಜಿನ್ನಪ್ಪ ಗೌಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
