ವಿಟ್ಲ: ಪುನರ್ ನಿರ್‍ಮಾಣಗೊಂಡ ಕುಳ ಮತ್ತು ವಿಟ್ಲಮೂಡ್ನೂರು ಗ್ರಾಮಕ್ಕೆ ಸಂಬಂಧಪಟ್ಟ ಕುಂಡಡ್ಕ ಪಿಲಿಪ್ಪೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಶಿಬರಿಕಲ್ಲು ಮಾಡ ದೈವಸ್ಥಾನ ಬ್ರಹ್ಮಕಲಶೋತ್ಸವ ಫೆ.5 ರಿಂದ ಆರಂಭಗೊಳ್ಳಲಿದ್ದು, ಬುಧವಾರ ಶ್ರೀ ಕ್ಷೇತ್ರದ ವಠಾರದಲ್ಲಿ ಎರಡು ಗ್ರಾಮಗಳ ಆಸ್ತಿಕ ಕಾರ್‍ಯಕರ್ತರ ಸಮಾಲೋಚನಾ ಸಭೆ ನಡೆಯಿತು.
ಗ್ರಾಮದ ದೇವಸ್ಥಾನ ಮತ್ತು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಂಡು ಬ್ರಹ್ಮಕಲಶಕ್ಕೆ ಸಿದ್ಧತೆ ನಡೆಯುತ್ತಿದೆ. ಒಗ್ಗಟ್ಟು, ಪರಿಶ್ರಮ, ಕೊಡುಗೆಗಳ ಅಗತ್ಯವಿದೆ. ದೇಗುಲದ ಬ್ರಹ್ಮಕಲಶವನ್ನು ಪ್ರಮುಖವೆಂದು ನಿರ್ಧರಿಸಿ ಭಾಗವಹಿಸಬೇಕು. ಗ್ರಾಮಸ್ಥರೆಲ್ಲರ ಸಹಕಾರ ಅತೀ ಅಗತ್ಯ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಸೀಮೆ ಗುರಿಕ್ಕಾರ ಕೆ.ಟಿ.ವೆಂಕಟೇಶ್ವರ ನೂಜಿ ಹೇಳಿದರು. ಬ್ರಹ್ಮಕಲಶ ಯಶಸ್ವಿಯಾಗಿಸಲು ಎಲ್ಲ ಗ್ರಾಮಸ್ಥರೂ ಓಂ ನಮೋ ಭಗವತೇ ವಾಸುದೇವಾಯ ಎಂದು ಪ್ರತಿದಿನವೂ ಪಠಿಸಬೇಕು. ಬ್ರಹ್ಮಕಲಶ ಸಂದರ್ಭ ಊರ ಪರವೂರ ಭಕ್ತರು ಆಗಮಿಸಲಿದ್ದಾರೆ. ಅವರನ್ನು ಆದರದಿಂದ ಆಮಂತ್ರಿಸುವುದರ ಜತೆಗೆ ಯಾವುದೇ ಕೊರತೆಯಾಗದಂತೆ, ಸ್ವಚ್ಛತೆಗೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಬೇಕು. ಹೊರೆಕಾಣಿಕೆಯಲ್ಲಿ ಬೆಂಗಳೂರಿನಿಂದ ದಾನಿಗಳು ಸಂಗ್ರಹಿಸಿದ ೬೦ ಕ್ವಿಂಟಾಲ್ ತರಕಾರಿ ಆಗಮಿಸಲಿದೆ ಎಂದು ತಿಳಿಸಿದರು.
ಕುಡ್ವ ಮನೆತನದ ಯೋಗೀಶ್ ಕುಡ್ವ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ವೇಣುಗೋಪಾಲ ಶೆಟ್ಟಿ ಮರುವಾಳ, ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ತಿಕ್ ಮೂಡಾಯಿಮಾರು, ಸೇಸಪ್ಪ ಗೌಡ ಬೆದ್ರಾಳ, ಚಿದಾನಂದ ಗೌಡ ಪೆಲತ್ತಿಂಜ ಮತ್ತಿತರರು ಮಾತನಾಡಿ, ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಗ್ರಾಮದ ಪ್ರತಿಭಾವಂತರನ್ನು ಪುರಸ್ಕರಿಸಲಾಗುವುದು ಎಂದು ತಿಳಿಸಲಾಯಿತು.
ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾಗತಿಸಿ, ಪ್ರಸ್ತಾವನೆಗೈದರು. ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಗೋವಿಂದರಾಜ್ ನಾನಾ ಮಾಹಿತಿ ನೀಡಿ, ವಂದಿಸಿದರು. ಹರೀಶ ನೀರಕೋಡಿ ಆಶಯಗೀತೆ ಹಾಡಿದರು. ಬೆಳಗ್ಗೆ ೧೦.೧೭ಕ್ಕೆ ಗೊನೆ ಮುಹೂರ್ತ ನೆರವೇರಿಸಲಾಯಿತು.
