ಕ್ರೋಧಗೊಳ್ಳದೆ ಶಾಂತವಾಗು ಮನವೇ ಶಿಕಾರಿ ಆಡಿದರಾಯಿತು ಮುಂದೆ/
ಹಾಗೆಂದು ಸೇರಿಕೊಳ್ಳದೆ ಮೂಲೆ ಉತ್ತರಿಸಲು ತಯಾರಾಗು ತಡ ಮಾಡದೇ//

ನುಂಗಿ ಮುನ್ನಡೆಯುವುದಾ ನೋಡಿಕೋ ಹೆಜ್ಜೆ ಹೆಜ್ಜೆಗೂ ಅವಮಾನ ಸಹಜವಿಲ್ಲಿ/
ಮೈಗೂಡುವಂತೆ ಸಹನೆ ಕ್ಯಾರೆ ಎನ್ನದೇ ನಡೆ ಮತ್ತೆ ಹಿಂತಿರುಗಿ ನೋಡದೆ//
ಏಟಿಗೆ ಎದಿರೇಟು ಮಾತಿಗೆ ಮಾತು ಸಲ್ಲದು ಅದಕ್ಕಿದೆ ಬೇರೆಯೇ ಪ್ರತ್ಯುತ್ತರ/
ಕಚ್ಚಾಡಿ ಕೈ ಬಾಯಿ ಗಬ್ಬಬ್ಬೆಸಿಕೊಳ್ಳದಿರು ಅವರ ಆ ಕೆಳಮಟ್ಟಕ್ಕೆ ನೀ ಇಳಿಯದೆ//
ಒಂದೊಂದು ಹೀಯಾಳಿಕೆ ಒಂದೊಂದು ಪಾಠ ವಾಸ್ತವದ ಅರಿವೇ ಸಂಸ್ಕೃತಿ/
ಮೌನವದು ಬಲಹೀನತೆಯಲ್ಲ ಪ್ರಖರ ಜ್ವಾಲೆ ಸವಾಲಾಗಿಸಕೋ ನಿಲ್ಲದೆ//
ಎಲ್ಲಾದಕ್ಕೂ ತತಕ್ಷಣದ ಪ್ರತಿಕ್ರಿಯೆಯ ಚಿಂತೆ ಬಿಡು ಬಾರದಂತೆ ಕೀಳರಿಮೆ/
ಗಟ್ಟಿಗೊಳಿಸಿಕೋ ಮನೋಸ್ಥೈರ್ಯ ಕುಗ್ಗಿ ನೊಂದು ತಲೆ ಕೆಡಿಸಕೊಳ್ಳದೆ//
ಬಿದ್ದಾಗ ಜುಟ್ಟು ಎದ್ದಾಗ ಕಾಲು ಹಿಡಿಯುವವರ ನಡುವೆ ತೋರಿಸು ನೀನು ಯಾರೆಂದು/
ಸಾಧಿಸುವ ಛಲ ಹುಟ್ಟು ಹಾಕಿದ ಮೂರ್ಖರವರು ಪಡೆ ಸ್ಪೂರ್ತಿ ಎಡೆಬಿಡದೆ//
ಕಾಲಚಕ್ರ ಉರುಳಿ ಬಂದು ನಿಂತಿತು ಅವರ ಬಳಿ ಆಗುವಂತೆ ನೋವಿನಾಳದ ಬಿಸಿ/
ಎಷ್ಟು ಸೋತರೇನು ಒಮ್ಮೆ ಗೆದ್ದು ಬಿಡು ಬಸು ಗೌರವ ಸನ್ಮಾನ ಎಲ್ಲವೂ ನಿನ್ನದೇ//
*ಬಸವರಾಜ ಕಾಸೆ*